ರಾಮನ ವೇಷದಲ್ಲಿದ್ದಾಗ ಮಗಳಿಗೆ ಮುತ್ತಿಡುವ ಮುದ್ದಾದ ಫೋಟೋ; ‘ರಾಮಾಯಣ’ ಚಿತ್ರೀಕರಣ ವೇಳೆ ರಣಬೀರ್–ರಾಹಾ ಅಪರೂಪದ ಕ್ಷಣ

ಮುಂಬೈ: ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ನಟಿ ಆಲಿಯಾ ಭಟ್ ಅವರು ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಅವರ ಅಪರೂಪದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಅಭಿಮಾನಿಗಳ ಗಮನ ಸೆಳೆದಿದ್ದು, ವೈರಲ್ ಆಗಿವೆ.

ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋಗಳಲ್ಲಿ ರಾಮನ ಪಾತ್ರದ ವೇಷದಲ್ಲಿರುವ ರಣಬೀರ್, ಮಗಳು ರಾಹಾಗೆ ಮುತ್ತಿಡುತ್ತಿರುವ ದೃಶ್ಯವಿದೆ. ಮತ್ತೊಂದು ಫೋಟೋದಲ್ಲಿ ರಾಹಾ ತಂದೆಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾಳೆ. ಎರಡೂ ಚಿತ್ರಗಳಲ್ಲಿ ಮಗಳ ಮುಖವನ್ನು ಆಲಿಯಾ ಹೃದಯದ ಎಮೋಜಿಯಿಂದ ಮರೆಮಾಡಿದ್ದಾರೆ.

ಪತಿ ರಣಬೀರ್ ಅವರನ್ನು ಹೊಗಳಿರುವ ಆಲಿಯಾ, ಚಿತ್ರದ ಚಿತ್ರೀಕರಣಕ್ಕಾಗಿ ಎಲ್ಲವನ್ನೂ ಧಾರೆಯೆರೆದಿದ್ದರೂ ಮಗಳಿಗಾಗಿ ಪ್ರೀತಿಯನ್ನು ಉಳಿಸಿಕೊಂಡಿದ್ದೀರಿ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ರಣಬೀರ್ ಹಾಗೂ ‘ರಾಮಾಯಣ’ ಚಿತ್ರತಂಡದ ಪರಿಶ್ರಮದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿರುವ ಅವರು, “ಕೆಲವು ಕಥೆಗಳು ನಮ್ಮೆಲ್ಲರಿಗಿಂತ ದೊಡ್ಡವು. ರಾಮಾಯಣ ಅಂತಹ ಕಥೆ” ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.