ಕತ್ತಲಲ್ಲಿ ಸಾಗರದ ಯಾಲಾರಿ ರಸ್ತೆ, ಬೀದಿ ನಾಯಿಗಳ ಕಾಟ: ಮೂಲಸೌಕರ್ಯಕ್ಕೆ ಶಾಸಕರಿಗೆ ಜಮೀಲ್ ಮನವಿ | Sagara

Sagaras Yalari Road in darkness menace of stray dogs Jameel appeals to MLA regarding infrastructure

ಶಿವಮೊಗ್ಗ: ಜಿಲ್ಲೆಯ ಸಾಗರ(Sagara) ನಗರಸಭೆ ವ್ಯಾಪ್ತಿಯ 31ನೇ ವಾರ್ಡ್‌ನ ವರದ ಕಾಲೋನಿ ನಿವಾಸಿಗಳು ಅಗತ್ಯ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ವಿಶೇಷವಾಗಿ ಯಾಲಾರಿ ರಸ್ತೆಯಲ್ಲಿ ಬೀದಿದೀಪಗಳಿಲ್ಲದೆ (Streetlight) ಸಾರ್ವಜನಿಕರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸುವಂತೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಾಮಾಜಿಕ ಕಾರ್ಯಕರ್ತ ಜಮೀಲ್(Zameel) ಸಾಗರ್ ಮನವಿ ಮಾಡಿದ್ದಾರೆ.

ಇಂದು ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ಪ್ರಜಾಸೇವೆ ಅಭಿಯಾನ’ ಸಭೆಯಲ್ಲಿ ಪಾಲ್ಗೊಂಡು ಅವರು ದೂರು ಸಲ್ಲಿಸಲಾಗಿದ್ದು, ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ.

ಕತ್ತಲಲ್ಲಿ ಯಾಲಾರಿ ರಸ್ತೆ: ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ನಾಗರಿಕರು

ವರದ ಕಾಲೋನಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಯಾಲಾರಿ ರಸ್ತೆಯಲ್ಲಿ ರಾತ್ರಿ ವೇಳೆ ಸಂಪೂರ್ಣ ಕತ್ತಲು ಆವರಿಸುತ್ತಿದ್ದು, ಬೀದಿ ದೀಪಗಳು (Street Lights) ಇಲ್ಲದೆ ನಾಗರಿಕರು ಆತಂಕದಲ್ಲೇ ಸಂಚರಿಸುವಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರು ರಾತ್ರಿ ಹೊತ್ತಿನಲ್ಲಿ ಈ ಮಾರ್ಗದಲ್ಲಿ ಓಡಾಡಲು ಭೀತಿಪಡುತ್ತಿದ್ದಾರೆ. ಜತೆಗೆ, ರಸ್ತೆಯುದ್ದಕ್ಕೂ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ನಡೆಸುವ ಅಪಾಯ ಎದುರಾಗಿದೆ.

ಜನಪ್ರತಿನಿಧಿಗಳ ಭರವಸೆಗೆ ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳು

ಈ ಹಿಂದೆ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಜನಸ್ಪಂದನ’ ಸಭೆಯಲ್ಲೂ ಸ್ಥಳೀಯರು ನೇರವಾಗಿ ಅಹವಾಲು ಸಲ್ಲಿಸಿದ್ದರು. ಶಾಸಕರು ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರೂ, ಸ್ಥಳೀಯ ನಗರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜನಪ್ರತಿನಿಧಿಗಳ ಆದೇಶಕ್ಕೂ ಬೆಲೆ ನೀಡದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಜಮೀಲ್ ಸಾಗರ್ ಅವರು ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಶಿಕ್ಷಣ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಲಿಖಿತ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ಪ್ರಜಾಸೇವೆ’ ಪೋರ್ಟಲ್‌ನಲ್ಲಿ ದೂರು: ಎಸಿ ಕಚೇರಿಯಿಂದ ಖಡಕ್ ಸೂಚನೆ

ಅರ್ಜಿದಾರ ಜಮೀಲ್ ಸಾಗರ್ ಅವರು ಸಾಗರ ಉಪವಿಭಾಗಾಧಿಕಾರಿಗಳ ಕಚೇರಿಯ ಪ್ರಜಾಸೇವೆ ಅಭಿಯಾನದಲ್ಲಿ ದಾಖಲಿಸಿದ ಕುಂದುಕೊರತೆ ಅರ್ಜಿ ಸಂಖ್ಯೆ 499527 ಅನ್ನು ಪುರಸ್ಕರಿಸಲಾಗಿದೆ. ವರದ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಯಾಲಾರಿ ರಸ್ತೆಯಲ್ಲಿ ಬೀದಿದೀಪ ಅಳವಡಿಕೆ ಹಾಗೂ ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಆದ್ಯತೆಯ ಮೇರೆಗೆ ಕ್ರಮ ಜರುಗಿಸಬೇಕು.

ಅಲ್ಲದೆ ಕೈಗೊಂಡ ಕ್ರಮಗಳ ವಿವರಗಳನ್ನು ಅರ್ಜಿದಾರರಿಗೆ ಒದಗಿಸಿ ‘ಪ್ರಜಾಸೇವೆ – iPGRS’ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಸಾಗರ ಉಪವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ