ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಭೀಕರ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಒಂದೇ ಕುಟುಂಬದ ಏಳು ಜನರನ್ನು ಬರ್ಬರವಾಗಿ ಕೊಲೆ(Brutal murder) ಮಾಡಿರುವ ಆಘಾತಕಾರಿ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮಾಧ್ಯಮಗಳಿಗೆ ಮಹತ್ವದ ವಿವರಗಳನ್ನು ನೀಡಿದ್ದಾರೆ.
ಏಳು ಜನರ ಕೊಲೆ: ಓರ್ವನ ಮೃತದೇಹ ಪತ್ತೆ, ಉಳಿದ ಆರು ಶವಗಳಿಗೆ ಶೋಧ
ನವೆಂಬರ್ 3 ರಂದು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದಾಗ, ಆರೋಪಿ ಇಂದುಶೇಖರ್ ಕುಟುಂಬದ ಏಳು ಜನರನ್ನು ತಾನೇ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಕೊಲೆಯಾದವರ ಪೈಕಿ ಪತ್ನಿ ಸುನೀತಾ, ರೂಪಾವತಿ, ಶಿವಕುಮಾರ್, ಶಂಕರ್, ನಳಿನಿ ಸೇರಿದಂತೆ ಒಟ್ಟು ಏಳು ಮಂದಿಯ ಹೆಸರನ್ನು ಆರೋಪಿ ಉಲ್ಲೇಖಿಸಿದ್ದಾನೆ. ಸದ್ಯ ಕೊಲೆಯಾದವರಲ್ಲಿ ಒಬ್ಬರ ಮೃತದೇಹ ಮಾತ್ರ ಪತ್ತೆಯಾಗಿದ್ದು, ಉಳಿದ ಆರು ಮೃತದೇಹಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಿ, ಶವಗಳನ್ನು ಎಸೆದಿದ್ದಾರೆನ್ನಲಾದ ಸ್ಥಳಗಳಿಗೆ ರವಾನಿಸಲಾಗಿದೆ. ಸದ್ಯ ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಅಪ್ರಾಪ್ತ ಬಾಲಕನ ಪ್ರಾಣಾಪಾಯದಿಂದ ರಕ್ಷಣೆ, ಮಗಳೂ ವಶಕ್ಕೆ
ಆರೋಪಿ ಇಂದುಶೇಖರ್ ಪೊಲೀಸರ ಕೈಗೆ ಸಿಕ್ಕಿಬಿದ್ದ ಸಂದರ್ಭದಲ್ಲಿ ಆತನ ಜೊತೆಯಲ್ಲಿ ಓರ್ವ ಅಪ್ರಾಪ್ತ ಬಾಲಕನಿದ್ದ. ವಿಚಾರಣೆ ವೇಳೆ ಆ ಬಾಲಕನನ್ನೂ ಹತ್ಯೆ ಮಾಡಲು ಆರೋಪಿ ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಸಂಗತಿ ಬಯಲಾಗಿದ್ದು, ಸಮಯಪ್ರಜ್ಞೆಯಿಂದ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನು ಈ ಅಮಾನವೀಯ ಕೃತ್ಯಕ್ಕೆ ಆರೋಪಿಯ ಅಪ್ರಾಪ್ತ ಮಗಳು ಕೂಡ ಸಾಥ್ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಕಲ್ಲಿನಿಂದ ಜಜ್ಜಿ ಕೃತ್ಯ: ಹಂತಕನ ಹಿನ್ನೆಲೆ ಏನು?
ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ 15 ರಿಂದ 20 ದಿನಗಳ ಅಂತರದಲ್ಲಿ ಈ ಎಲ್ಲಾ ಕೊಲೆಗಳನ್ನು ಎಸಗಲಾಗಿದೆ. ಸಂತ್ರಸ್ತರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಂದು, ಬೇರೆ ಬೇರೆ ಕಡೆಗಳಲ್ಲಿ ಮೃತದೇಹಗಳನ್ನು ಎಸೆದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆತನ ಹೇಳಿಕೆಯನ್ನು ಆಧರಿಸಿ ಆಯಾ ವ್ಯಾಪ್ತಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಸಮನ್ವಯದೊಂದಿಗೆ ಮೃತದೇಹಗಳ ಶೋಧ ಮತ್ತು ಪರಿಶೀಲನಾ ಕಾರ್ಯ ಮುಂದುವರಿದಿದೆ.
ಆರೋಪಿ ಈ ಹಿಂದೆ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಈತನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಸರಗಳ್ಳತನ ಪ್ರಕರಣವೂ ದಾಖಲಾಗಿತ್ತು. ಪ್ರಸ್ತುತ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಯುತ್ತಿದ್ದು, ಇಷ್ಟೊಂದು ದೊಡ್ಡ ಮಟ್ಟದ ಸರಣಿ ಕೊಲೆಗೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.




