ನವದೆಹಲಿ: ದೇಶದಲ್ಲಿ ವ್ಯಾಪಾರ ವಹಿವಾಟು ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ಜಿಎಸ್ಟಿ ಕೌನ್ಸಿಲ್ (GST Council) ಗುರುವಾರ ಮಹತ್ವದ ಜಾರಿ ಮತ್ತು ಪ್ರಕ್ರಿಯಾತ್ಮಕ ಸುಧಾರಣೆಗಳಿಗೆ ಅನುಮೋದನೆ ನೀಡಿದೆ. ‘ಜಿಎಸ್ಟಿ 2.0’ ಭಾಗವಾಗಿ ಕೈಗೊಂಡಿರುವ ಈ ತೀರ್ಮಾನಗಳಲ್ಲಿ ಅಧಿಕಾರಿಗಳ ನೇರ ಬಂಧನ ಅಧಿಕಾರವನ್ನು(Power of arrest) ಸಂಪೂರ್ಣವಾಗಿ ತೆಗೆದುಹಾಕಿರುವುದು ಹಾಗೂ ಕ್ರಿಮಿನಲ್ ಮೊಕದ್ದಮೆ (ಪ್ರಾಸಿಕ್ಯೂಷನ್) ದಾಖಲಿಸುವ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಿರುವುದು ಪ್ರಮುಖವಾಗಿವೆ. ಜತೆಗೆ ಸಾಮಾನ್ಯ ದಂಡದ ಮೊತ್ತವನ್ನು ₹25,000 ದಿಂದ ₹10,000 ಕ್ಕೆ ಇಳಿಸಲಾಗಿದೆ.
ಈ ಸಭೆಯಲ್ಲಿ ಯಾವುದೇ ವಸ್ತು ಅಥವಾ ಸೇವೆಗಳ ಮೇಲಿನ ತೆರಿಗೆ ದರಗಳನ್ನು ಬದಲಾಯಿಸಲಾಗಿಲ್ಲ. ಇನ್ನು ಮುಂದೆ ತೆರಿಗೆ ದರಗಳ ಪರಿಷ್ಕರಣೆಯನ್ನು ವರ್ಷಕ್ಕೊಮ್ಮೆ ಮಾತ್ರ ಮೀಸಲಾದ ಪ್ರತ್ಯೇಕ ಸಭೆಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಸದ್ಯ ದೈನಂದಿನ ನಿಯಮಗಳ ಪಾಲನೆ, ನೋಂದಣಿ, ರಿಟರ್ನ್ಸ್, ರೀಫಂಡ್ ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನಿಯಮಗಳ ಸರಳೀಕರಣಕ್ಕೆ ಸಂಪೂರ್ಣ ಒತ್ತು ನೀಡಲಾಗಿದೆ. ಪ್ರಸ್ತುತ ದೇಶದಲ್ಲಿ ಮಾಸಿಕ ತೆರಿಗೆಯೋಗ್ಯ ವಹಿವಾಟು ಶೇ. 25.8 ರಷ್ಟು ಏರಿಕೆಯಾಗಿ ₹50.58 ಲಕ್ಷ ಕೋಟಿಗೆ ತಲುಪಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಎಸ್ಟಿ ಆದಾಯ ಶೇ. 11 ರಷ್ಟು ಬೆಳವಣಿಗೆ ಕಂಡಿದೆ.
ಬಂಧನದ ಭೀತಿಯಿಂದ ಮುಕ್ತಿ, ಡೇಟಾ ಆಧಾರಿತ ತಪಾಸಣೆ
ಜಿಎಸ್ಟಿ ವ್ಯಾಪ್ತಿಯಲ್ಲಿ ಈ ಹಿಂದೆ ಅಧಿಕಾರಿಗಳಿಗಿದ್ದ ನೇರ ಬಂಧನದ ಅಧಿಕಾರವನ್ನು ರದ್ದುಪಡಿಸಿರುವುದು ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಕ್ರಿಮಿನಲ್ ಕ್ರಮಗಳ ಮೂಲಕ ಭಯ ಹುಟ್ಟಿಸುವುದಕ್ಕಿಂತ ಹೆಚ್ಚಾಗಿ, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಶ್ಲೇಷಣೆಯ ಮೂಲಕ ನಕಲಿ ಇನ್ವಾಯ್ಸ್ ಹಾಗೂ ತೆರಿಗೆ ವಂಚನೆ ಪತ್ತೆಹಚ್ಚುವತ್ತ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ಪ್ರಾಸಿಕ್ಯೂಷನ್ ಮಿತಿಯನ್ನು ₹5 ಕೋಟಿಗೆ ಹೆಚ್ಚಿಸಿ, ಕನಿಷ್ಠ ಶಿಕ್ಷೆಯ ನಿಯಮವನ್ನು ರದ್ದುಪಡಿಸಿ ನ್ಯಾಯಾಲಯಗಳ ವಿವೇಚನೆಗೆ ಬಿಡಲಾಗಿದೆ. ಇದು ವಾಡಿಕೆಯ ವ್ಯಾಪಾರ ವಿವಾದಗಳು ಕ್ರಿಮಿನಲ್ ಪ್ರಕರಣಗಳಾಗಿ ಬದಲಾಗುವುದನ್ನು ತಡೆಯಲಿದೆ.
ವೇಗದ ರೀಫಂಡ್ ಮತ್ತು ಸುಲಭ ನೋಂದಣಿ ಪ್ರಕ್ರಿಯೆ
ರಫ್ತುದಾರರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ರೀಫಂಡ್ ವ್ಯವಸ್ಥೆಯನ್ನು ಚುರುಕುಗೊಳಿಸಲಾಗಿದೆ. ರೀಫಂಡ್ ಸ್ವೀಕೃತಿ (Acknowledgment) ನೀಡುವ ಗಡುವನ್ನು 15 ರಿಂದ 10 ದಿನಗಳಿಗೆ ಇಳಿಸಲಾಗಿದೆ. ರಿಸ್ಕ್ ಅಸೆಸ್ಮೆಂಟ್ ಆಧಾರದ ಮೇಲೆ ಶೇಕಡಾ 90 ರಷ್ಟು ಕ್ಲೈಮ್ ಮೊತ್ತವನ್ನು ಸ್ವೀಕೃತಿಯ ಮೂರು ಕೆಲಸದ ದಿನಗಳಲ್ಲಿ ಮಂಜೂರು ಮಾಡಲಾಗುತ್ತದೆ. ಕ್ಯಾಶ್ ಲೆಡ್ಜರ್ನಲ್ಲಿರುವ ಹೆಚ್ಚುವರಿ ಮೊತ್ತದ ರೀಫಂಡ್ ಸಂಪೂರ್ಣ ಸ್ವಯಂಚಾಲಿತವಾಗಲಿದೆ. ಇನ್ವರ್ಟೆಡ್ ಡ್ಯೂಟಿ ಅಡಿಯಲ್ಲಿ ಇನ್ಪುಟ್ ಸೇವೆಗಳ ರೀಫಂಡ್ಗೆ ನವೆಂಬರ್ 1, 2026 ರಿಂದ ಹಾಗೂ ಪ್ಲಾಂಟ್ ಮತ್ತು ಮೆಷಿನರಿ ರೀಫಂಡ್ಗೆ ಏಪ್ರಿಲ್ 1, 2027 ರಿಂದ ಅವಕಾಶ ಕಲ್ಪಿಸಲಾಗಿದೆ.
ಸಣ್ಣ ವ್ಯಾಪಾರಿಗಳು, ಇ-ಕಾಮರ್ಸ್ ಹಾಗೂ ಐಟಿಸಿ ನಿಯಮ ಸಡಿಲಿಕೆ
ಗ್ರಾಹಕರಿಗೆ ಮಾತ್ರ ಸರಕು ಪೂರೈಸುವ ₹5 ಕೋಟಿ ವರೆಗಿನ ವಹಿವಾಟು ಹೊಂದಿರುವ ಸಣ್ಣ ತೆರಿಗೆದಾರರಿಗೆ ತ್ರೈಮಾಸಿಕ ತೆರಿಗೆ ಪಾವತಿ ಮತ್ತು ವರ್ಷಕ್ಕೊಮ್ಮೆ ಮಾತ್ರ ರಿಟರ್ನ್ ಸಲ್ಲಿಸುವ ಐಚ್ಛಿಕ ಯೋಜನೆಯನ್ನು ಜಾರಿಗೆ ತರಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು ಇತರ ರಾಜ್ಯಗಳಲ್ಲಿರುವ ಆಪರೇಟರ್ಗಳ ಗೋದಾಮುಗಳನ್ನು ತಮ್ಮ ಮುಖ್ಯ ವ್ಯವಹಾರದ ಸ್ಥಳ ಎಂದು ಸುಲಭವಾಗಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗಿಗಳಿಗೆ ಪಡೆಯುವ ಆರೋಗ್ಯ ಮತ್ತು ಜೀವ ವಿಮೆ, ಕಾರ್ಖಾನೆ ಹೊರಗಿನ ಟೆಲಿಕಾಂ ಟವರ್ಗಳು, ಪೈಪ್ಲೈನ್ಗಳು, ಉಚಿತ ಸ್ಯಾಂಪಲ್ಸ್ ಹಾಗೂ ಕಾನೂನುಬದ್ಧವಾಗಿ ನಾಶಪಡಿಸಿದ ಅವಧಿ ಮೀರಿದ ಸರಕುಗಳ ಮೇಲೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯಲು ಹಸಿರುನಿಶಾನೆ ತೋರಲಾಗಿದೆ.
ಸಾಗಾಣಿಕೆ ವಾಹನಗಳ ತಪಾಸಣೆಗೆ ಕಟ್ಟುನಿಟ್ಟಿನ ನಿಯಮ
ರಸ್ತೆಗಳಲ್ಲಿ ಸರಕು ಸಾಗಣೆ ವಾಹನಗಳನ್ನು ಅನಗತ್ಯವಾಗಿ ತಡೆದು ತಪಾಸಣೆ ನಡೆಸುವುದಕ್ಕೆ ಬ್ರೇಕ್ ಹಾಕಲಾಗಿದೆ. ಜಂಟಿ ಆಯುಕ್ತ (Joint Commissioner) ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯ ಪೂರ್ವಾನುಮತಿ ಮತ್ತು ಖಚಿತ ಮಾಹಿತಿಯಿದ್ದರೆ ಮಾತ್ರ ವಾಹನವನ್ನು ತಡೆಯಬಹುದು. ಸರಕು ಹೊರಡುವ ರಾಜ್ಯ ಮತ್ತು ತಲುಪುವ ರಾಜ್ಯದ ಅಧಿಕಾರಿಗಳಿಗೆ ಮಾತ್ರ ತಪಾಸಣೆ ನಡೆಸಲು ಅಧಿಕಾರವಿದ್ದು, ಮಾರ್ಗಮಧ್ಯದ ರಾಜ್ಯಗಳು ವಾಹನಗಳನ್ನು ಅಡ್ಡಗಟ್ಟುವಂತಿಲ್ಲ.
ಸೇವಾ ರಫ್ತು ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ
ವಿದೇಶಿ ಗ್ರಾಹಕರ ಸರಕುಗಳ ಮೇಲೆ ಭಾರತದಲ್ಲೇ ಕುಳಿತು ನಡೆಸುವ ಪರೀಕ್ಷೆ, ಸಂಶೋಧನೆ, ದುರಸ್ತಿ ಮತ್ತು ಪ್ರಮಾಣೀಕರಣದಂತಹ ಕೆಲಸಗಳನ್ನು ‘ಸೇವಾ ರಫ್ತು’ (Export of Service) ಎಂದು ಪರಿಗಣಿಸಲು ಒಪ್ಪಿಗೆ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಇಂಜಿನಿಯರಿಂಗ್ ಮತ್ತು ಗುತ್ತಿಗೆ ಉತ್ಪಾದನಾ ಕ್ಷೇತ್ರಗಳಿಗೆ ಉತ್ತೇಜನ ನೀಡಲಿದೆ. ಈ ಮಹತ್ವದ ತೀರ್ಮಾನಗಳನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಸ್ವಪನ್ ದಾಸ್ಗುಪ್ತಾ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಸ್ವಾಗತಿಸಿದ್ದಾರೆ.



