ಬೆಂಗಳೂರು: ದೇಶದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಯು ತುರ್ತು ಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ. ಅತ್ಯುನ್ನತ ಮತ್ತು ತುರ್ತು ವೈದ್ಯಕೀಯ ಸೇವೆಗಾಗಿ ಅಂತರರಾಷ್ಟ್ರೀಯ ತುರ್ತು ಚಿಕಿತ್ಸಾ ಒಕ್ಕೂಟ (IFEM) ನೀಡುವ ‘ಗೋಲ್ಡ್ ಲೆವೆಲ್’ ಪ್ರಮಾಣೀಕರಣವನ್ನು ಪಡೆದುಕೊಂಡ ಜಗತ್ತಿನ ಪ್ರಥಮ ಆಸ್ಪತ್ರೆ ಎಂಬ ಖ್ಯಾತಿಗೆ ಈ ಸಂಸ್ಥೆ ಭಾಜನವಾಗಿದೆ.
ಜರ್ಮನಿಯಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ತುರ್ತು ಚಿಕಿತ್ಸಾ ಸಮ್ಮೇಳನದಲ್ಲಿ (ICEM) ಈ ಪ್ರತಿಷ್ಠಿತ ಪ್ರಮಾಣಪತ್ರವನ್ನು ಸ್ಪರ್ಶ್ ಆಸ್ಪತ್ರೆಗೆ ಅಧಿಕೃತವಾಗಿ ಪ್ರದಾನ ಮಾಡಲಾಯಿತು.
ಅಂತರರಾಷ್ಟ್ರೀಯ ಮಟ್ಟದ ಕಠಿಣ ಮೌಲ್ಯಮಾಪನದಲ್ಲಿ ಶೇ. 99.6 ಅಂಕ
ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಹಂಚಿಕೊಂಡ ಸ್ಪರ್ಶ್ ಆಸ್ಪತ್ರೆಗಳ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಶರಣ್ ಶಿವರಾಜ್ ಪಾಟೀಲ್, “ತುರ್ತು ವಿಭಾಗದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಮೂಲಸೌಕರ್ಯ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡಿದ್ದಕ್ಕಾಗಿ ಈ ಗೌರವ ಸಿಕ್ಕಿದೆ. ಡಿಸೆಂಬರ್ 3 ರಿಂದ 5, 2025 ರ ಅವಧಿಯಲ್ಲಿ ಜಾಗತಿಕ ಮಟ್ಟದ ಟಿಎಎಸ್‌ಎನ್‌ಇಇಎಫ್ (TASNEEF) ಸಂಸ್ಥೆಯ ಸಹಯೋಗದೊಂದಿಗೆ ನಡೆಸಲಾದ ಮೂರು ದಿನಗಳ ಸುದೀರ್ಘ ಪರಿಶೀಲನೆಯಲ್ಲಿ ಆಸ್ಪತ್ರೆಯು ಶೇ. 99.6 ರಷ್ಟು ರೇಟಿಂಗ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಗಳಿಸಿದೆ” ಎಂದರು.
ಈ ಪರಿಶೋಧನೆಯ ಸಮಯದಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಧಾನ, ತೀವ್ರತೆಗೆ ಅನುಗುಣವಾಗಿ ತ್ವರಿತವಾಗಿ ಉಪಚರಿಸುವ ಆದ್ಯತಾ ವ್ಯವಸ್ಥೆ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ರೋಗಿಗಳ ಭದ್ರತಾ ಕ್ರಮಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ಪರಿಶೀಲನೆ ನಡೆಸಲಾಗಿತ್ತು.
ರೋಗಿಗಳ ಪ್ರಾಣರಕ್ಷಣೆಗೆ ಬದ್ಧತೆ: ಡಾ. ಟಿ.ಎಸ್. ಶ್ರೀನಾಥ್ ಕುಮಾರ್
ಆಸ್ಪತ್ರೆಯ ತುರ್ತು ವಿಭಾಗದ ಹಿರಿಯ ಸಲಹೆಗಾರ ಹಾಗೂ ಮುಖ್ಯಸ್ಥರಾದ ಡಾ. ಟಿ.ಎಸ್. ಶ್ರೀನಾಥ್ ಕುಮಾರ್ ಮಾತನಾಡಿ, “ತುರ್ತು ಸನ್ನಿವೇಶಗಳಲ್ಲಿ ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ಸರಿಯಾದ ನಿರ್ಧಾರ ಹಾಗೂ ವೇಗವಾದ ಚಿಕಿತ್ಸೆಯು ರೋಗಿಯ ಜೀವರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಟ್ಟು 10 ವಿಭಾಗಗಳ ಅಡಿಯಲ್ಲಿ 200 ಕ್ಕೂ ಹೆಚ್ಚು ಕಠಿಣ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಿ ಈ ಗೋಲ್ಡ್ ಪ್ರಮಾಣಪತ್ರ ಪಡೆದ ಭಾರತದ ಮೊದಲ ಆಸ್ಪತ್ರೆ ಸ್ಪರ್ಶ್ ಆಗಿದೆ. ಇದು ನಮ್ಮ ವೈದ್ಯಕೀಯ ಸೇವೆಯ ನಿಖರತೆ ಹಾಗೂ ರೋಗಿಗಳ ಸುರಕ್ಷತೆಗೆ ನಾವು ನೀಡುವ ಆದ್ಯತೆಗೆ ಸಿಕ್ಕ ಜಾಗತಿಕ ಮನ್ನಣೆಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.




