ಶಿವಮೊಗ್ಗ: ದೇಶದ ಅಂತರ್ಗತ ಚೈತನ್ಯವಿರುವುದು ಅಧ್ಯಾತ್ಮದಲ್ಲಿ. ಈ ಜ್ಞಾನದ ಆಳವನ್ನು ಅರಿತು ಜಗತ್ತಿಗೆ ಪಸರಿಸಿದಾಗ ಮಾತ್ರ ಭಾರತ ವಿಶ್ವಗುರುವಿನ ಪಟ್ಟ ಅಲಂಕರಿಸಲು ಸಾಧ್ಯ ಎಂದು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದಿಸಿದರು.
ನಗರದಲ್ಲಿ ಸೋಮವಾರ (ಆಗಸ್ಟ್ 17) ಆಯೋಜನೆಗೊಂಡಿದ್ದ “ದಿವ್ಯ ಸಂಜೆ” ಸಂವಾದ ಗೋಷ್ಟಿಯಲ್ಲಿ ಖ್ಯಾತ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರೊಂದಿಗೆ ವಿಚಾರ ವಿನಿಮಯ ನಡೆಸಿದ ಅವರು, ಪ್ರಸ್ತುತ ಪಾಶ್ಚಿಮಾತ್ಯ ಮತ್ತು ಏಷ್ಯಾದ ಪ್ರಮುಖ ರಾಷ್ಟ್ರಗಳಾದ ಅಮೆರಿಕ, ಚೀನಾ, ಜಪಾನ್, ಟರ್ಕಿ ಹಾಗೂ ಇರಾನ್‌ನಲ್ಲೂ ಭಾರತೀಯ ಅಧ್ಯಾತ್ಮ ಪರಂಪರೆ ಕುರಿತು ಅಗಾಧ ಆಸಕ್ತಿ ಮೂಡಿದೆ ಎಂದು ವಿಶ್ಲೇಷಿಸಿದರು.
ಪರಿಸರ ಪ್ರೇಮ ಮತ್ತು ಮೌಲ್ಯಾಧಾರಿತ ಶಿಕ್ಷಣದ ಅನಿವಾರ್ಯತೆ
‘ವಸುಧೈವ ಕುಟುಂಬಕಂ’ ಪರಿಕಲ್ಪನೆಯು ಕೇವಲ ಮಾನವರಿಗೆ ಸೀಮಿತವಾಗಿರದೆ, ಪಂಚಭೂತಗಳು ಹಾಗೂ ಸಮಸ್ತ ಪ್ರಾಣಿ ಸಂಕುಲವನ್ನೂ ಒಳಗೊಂಡ ವಿಶಾಲ ಕುಟುಂಬವಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗಾಗಿ ವಕೀಲರ ಸಂಘದ ಜತೆಗೂಡಿ ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಡುವ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಸದ್ಗುರುಗಳು ತಿಳಿಸಿದರು.
ಇಂದಿನ ಕಾಲಘಟ್ಟದಲ್ಲಿ ವ್ಯಕ್ತಿಯ ಯಶಸ್ಸನ್ನು ಕೇವಲ ಆರ್ಥಿಕ ಗಳಿಕೆಯಿಂದ ಅಳೆಯುವ ಮಾನದಂಡವೇ ಸಮಾಜದ ಬಹುತೇಕ ಸಮಸ್ಯೆಗಳ ಮೂಲ. ನಿಸ್ವಾರ್ಥ ಸೇವಾ ಮನೋಭಾವ ರೂಪಿಸದ ಶಿಕ್ಷಣ ಅಪೂರ್ಣ. ಮಕ್ಕಳಲ್ಲಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೇ ಹೊರತು, ಪ್ರತಿಯೊಬ್ಬರೂ ವೈದ್ಯರಾಗಬೇಕೆಂಬ ಒತ್ತಡ ಹೇರಬಾರದು. ಜಾಗತಿಕ ಮಟ್ಟದಲ್ಲಿ ಮಕ್ಕಳು ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಗೆ ಒಳಗಾಗುತ್ತಿರುವುದು ಕಳವಳಕಾರಿಯಾಗಿದ್ದು, ಜೀವನದ ಸವಾಲುಗಳನ್ನು ದಿಟ್ಟವಾಗಿ ಎದುರಿಸುವ ಧೈರ್ಯ ತುಂಬುವ ಶಿಕ್ಷಣ ಇಂದಿನ ತುರ್ತು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಗತ್ತಿಗೆ ಆದರ್ಶವಾದ ನಿಸ್ವಾರ್ಥ ಸೇವಾ ಪಥ
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಮರೂರಿನ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ ಮುಖ್ಯ ಪಾಲಕ ಶಿವಪ್ರಸಾದ್ ಭಟ್, ಜಾಗತಿಕ ಸವಾಲುಗಳಿಗೆ ‘ಒಂದು ವಿಶ್ವ, ಒಂದು ಕುಟುಂಬ’ ಪರಿಕಲ್ಪನೆಯೇ ದಿವ್ಯ ಪರಿಹಾರ. ಸದ್ಗುರುಗಳು ಉಚಿತ ಶಿಕ್ಷಣ, ವೈದ್ಯಕೀಯ ನೆರವು ಮತ್ತು ಪೌಷ್ಟಿಕ ಆಹಾರ ವಿತರಣೆಯ ಮೂಲಕ ಜಗತ್ತಿಗೆ ನಿಸ್ವಾರ್ಥ ಸೇವಾ ಪಥವನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ವೇದಿಕೆಯಲ್ಲಿ ಅನುಭವ ಹಂಚಿಕೊಂಡ ಗುರುಕುಲದ ಎಂಟನೇ ತರಗತಿ ವಿದ್ಯಾರ್ಥಿ ಸಚಿನ್ (ಭದ್ರಾಪುರ), ಸಂಸ್ಥೆಗೆ ಸೇರಿದ ನಂತರ ತನ್ನ ಕೋಪ ಕಡಿಮೆಯಾಗಿ ಸಂಪೂರ್ಣ ಸಕಾರಾತ್ಮಕ ಬದಲಾವಣೆ ಕಂಡಿರುವುದಾಗಿ ತಿಳಿಸಿದನು. ಇಂಗ್ಲಿಷ್ ಭಾಷೆಯ ಭಯದಿಂದ ಮುಕ್ತನಾಗಿ, ಆಧುನಿಕ ಶಿಕ್ಷಣದ ಜತೆಗೆ ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯನ್ನು ಕಲಿಯುತ್ತಿರುವುದಾಗಿ ತಿಳಿಸಿ ಸಂಸ್ಕೃತ ಸುಭಾಷಿತವನ್ನು ಸಾದರಪಡಿಸಿದನು.
ಋಷಿ-ಮುನಿಗಳ ನಿಸ್ವಾರ್ಥತೆಯೇ ಭಾರತದ ಹಿರಿಮೆ: ಕೆ.ಎಸ್. ಈಶ್ವರಪ್ಪ
ಸಮಾರಂಭದಲ್ಲಿ ಸದ್ಗುರುಗಳಿಂದ ಗೌರವ ಸ್ವೀಕರಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಭಾರತಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಹಿರಿಮೆ ನಮ್ಮ ಸಾಧು-ಸಂತರ ನಿಸ್ವಾರ್ಥ ಸೇವೆಗೆ ಸಲ್ಲುತ್ತದೆ. ಸಮಾಜದಲ್ಲಿ ಶಾಲೆ, ಆಸ್ಪತ್ರೆಗಳನ್ನು ನಿರ್ಮಿಸುವವರು ಹಲವರಿದ್ದಾರೆ; ಆದರೆ ಮಾನಸಿಕ ಶಾಂತಿಗೆ ಕಾರಣವಾಗುವ ಅಧ್ಯಾತ್ಮವನ್ನು ಧಾರೆ ಎರೆಯುವವರು ಅಪರೂಪ. ಈ ನಿಟ್ಟಿನಲ್ಲಿ ಸದ್ಗುರುಗಳ ಕಾರ್ಯ ಇಡೀ ವಿಶ್ವಕ್ಕೆ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸೇವಾ ಸಂಸ್ಥೆಗಳ ಸಮಗ್ರ ಪರಿಚಯ
ಶ್ರೀ ಸತ್ಯ ಸಾಯಿ ಸರ್ವನಿಕೇತನಂ ವಸತಿ ಶಾಲೆ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಕಮರೂರು ಗ್ರಾಮದಲ್ಲಿ 2019 ರಿಂದ 40 ಎಕರೆ ಹಸಿರು ಪರಿಸರದಲ್ಲಿ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 6ರಿಂದ 8ನೇ ತರಗತಿವರೆಗೆ ಸುಮಾರು 200 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇವರಲ್ಲಿ ಶೇ. 67.50ರಷ್ಟು ಗ್ರಾಮೀಣ ಮಕ್ಕಳು ಹಾಗೂ ಶೇ. 42ರಷ್ಟು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳವರಾಗಿದ್ದಾರೆ. ವಿಶೇಷವೆಂದರೆ ಶೇ. 69.10ರಷ್ಟು ಮಕ್ಕಳು ತಮ್ಮ ಕುಟುಂಬದಲ್ಲೇ ಪ್ರಪ್ರಥಮ ಬಾರಿಗೆ ಶಾಲಾ ಶಿಕ್ಷಣ ಪಡೆಯುತ್ತಿರುವವರಾಗಿದ್ದಾರೆ. ಇದೇ ಆವರಣದಲ್ಲಿರುವ ‘ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್’ ಗ್ರಾಮೀಣರಿಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ.
ದಾಖಲಾತಿ ಪ್ರಕ್ರಿಯೆ: ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಶಿಕ್ಷಣ ಸಂಸ್ಥೆಗಳ ಪ್ರತಿ ಕ್ಯಾಂಪಸ್‌ನಲ್ಲಿ 6ನೇ ತರಗತಿಗೆ ಪ್ರತಿವರ್ಷ 25 ಸೀಟುಗಳು ಲಭ್ಯವಿರುತ್ತವೆ. ಇದರಲ್ಲಿ 15 ಸೀಟುಗಳನ್ನು ಆನ್‌ಲೈನ್ ಅರ್ಜಿ ಮೂಲಕ ಮತ್ತು 10 ಸೀಟುಗಳನ್ನು ಅತ್ಯಂತ ದುರ್ಬಲ ವರ್ಗದ ಮಕ್ಕಳಿಗಾಗಿ ಕಾಯ್ದಿರಿಸಲಾಗುತ್ತದೆ.
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್: ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ‘ಪ್ರೀತಿ ಮತ್ತು ಸೇವೆ’ಯ ತತ್ವಾದರ್ಶಗಳಡಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಹಾ ಅಭಿಯಾನವು ವಿಶ್ವದ 100 ದೇಶಗಳಲ್ಲಿ ವ್ಯಾಪಿಸಿದೆ. ಇದರ ಮೂಲಕ ಕೋಟ್ಯಂತರ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ತಲುಪಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ www.owofmission.org ವೆಬ್ ಸೈಟ್ ಗೆ ಭೇಟಿ ನೀಡಿ ಪಡೆಯಬಹುದಾಗಿದೆ.



