ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಪ್ರಕಟಿಸಲಾಗಿದ್ದ ಅಂತಿಮ ವೇಳಾಪಟ್ಟಿಯ ಪ್ರಕಾರ ಮಾರ್ಚ್ 30ರಂದು ತೃತೀಯ ಭಾಷೆ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರವು ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗಿದ್ದ ಸಾರ್ವತ್ರಿಕ ರಜೆಯನ್ನು ಮಾರ್ಚ್ 31ರ ಬದಲಾಗಿ ಮಾರ್ಚ್ 30ರ ಸೋಮವಾರಕ್ಕೆ ಬದಲಾಯಿಸಿ ಆದೇಶ ಹೊರಡಿಸಿದೆ.
ಸರ್ಕಾರದ ಈ ಹೊಸ ಆದೇಶದ ಹಿನ್ನೆಲೆಯಲ್ಲಿ, ಮಾರ್ಚ್ 30ರಂದು ನಿಗದಿಯಾಗಿದ್ದ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ಈಗ ಮಾರ್ಚ್ 31ರ ಮಂಗಳವಾರದಂದು ನಡೆಸಲು ಮಂಡಲಿ ತೀರ್ಮಾನಿಸಿದೆ. ಈ ಪರೀಕ್ಷೆಯು ಈಗಾಗಲೇ ನಿಗದಿಪಡಿಸಿರುವ ಅವಧಿಯಲ್ಲೇ ನಡೆಯಲಿದ್ದು, ವೇಳಾಪಟ್ಟಿಯಲ್ಲಿರುವ ಉಳಿದ ವಿಷಯಗಳ ಪರೀಕ್ಷೆಗಳು ಯಾವುದೇ ಬದಲಾವಣೆಯಿಲ್ಲದೆ ಯಥಾವತ್ತಾಗಿ ಮುಂದುವರಿಯಲಿವೆ ಎಂದು ಮಂಡಲಿಯ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ದಿನಾಂಕ 26.03.2026ರಂದು ಈ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಬದಲಾವಣೆಯನ್ನು ಗಮನಿಸಬೇಕೆಂದು ಕೋರಲಾಗಿದೆ.




