ಮೀಸಲಾತಿ, ಒಳಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರದ ಕಳ್ಳಾಟ, ಸದ್ಯದಲ್ಲೇ ಜನಾಂದೋಲನ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮೀಸಲಾತಿ ಮತ್ತು ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ. ಘೋಷಣೆ ಮಾಡುವಾಗ ಗೊಂದಲ ಸೃಷ್ಟಿಸಿ ಅನ್ಯಾಯ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಮೀಸಲಾತಿ ಮತ್ತು ಒಳಮೀಸಲಾತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡುತ್ತಿದೆ. ಯಾರಾದರೂ ಕೋರ್ಟಿಗೆ ಹೋಗಲಿ, ಪ್ರಶ್ನೆ ಮಾಡಲಿ, ಹೇಗಾದರೂ ನಿಂತು ಹೋಗಲಿ ಎಂಬ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಂತಿದೆ. ಇದರ ವಿರುದ್ಧ ಜನರ ಆಕ್ರೋಶ ಇದೆ. ಅದನ್ನು ಆಂದೋಲನವಾಗಿ ಪರಿವರ್ತಿಸುತ್ತೇವೆ. ಇಡೀ ರಾಜ್ಯದಲ್ಲಿ ದೊಡ್ಡ ಹೋರಾಟ ಆರಂಭವಾಗಲಿದೆ. ಇದರ ರೂಪರೇಷೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳು ಹೋರಾಟ ಮಾಡುತ್ತಿರುವುದನ್ನು ಗಮನಿಸಿ, ಪರಿಶಿಷ್ಟ ಜಾತಿಗೆ ಶೇ15 ರಿಂದ 17ಕ್ಕೆ, ವರ್ಗಗಳಿಗೆ ಶೇ 3 ರಿಂದ 7 ಕ್ಕೆ ಅಂದರೆ ಎರಡೂ ಸೇರಿ ಶೇ 25 ಮೀಸಲಾತಿ ಕೊಟ್ಟಿದ್ದೆವು. ಇದನ್ನು ಅಂದು ವಿರೋಧ ಪಕ್ಷ ಸೇರಿ ಎಲ್ಲರ ಒಪ್ಪಿಗೆ ಪಡೆದ ನಂತರವೇ ಘೋಷಣೆ ಮಾಡಲಾಗಿತ್ತು. ಆದರೂ ಚುನಾವಣೆ ವೇಳೆ ಸಿದ್ದರಾಮಯ್ಯ ವಿರೋಧಿಸಿದ್ದರು ಎಂದು ದೂರಿದರು.

ನಂತರ ಒಳಮೀಸಲಾತಿ ಕೊಡುವ ವೇಳೆ ನ್ಯಾಯಮೂತಿಗಳಾದ ಡಾ. ಎಚ್ ಎನ್ ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದಾಗ ಶೇ 17 ಕ್ಕೆ ಒಪ್ಪಿಗೆ ಕೊಟ್ಟು ವಹಿಸಿದ್ದರು. ಅದರ ಪ್ರಕಾರ ಜಾರಿ ಮಾಡಬೇಕಾಗಿತ್ತು. ಅವರು ಶಿಫಾರಸು ಮಾಡಿದ್ದು ಐದು ಗುಂಪುಗಳು. ಆದರೆ ಇವರು ರಾಜಕೀಯ ಲಾಭಕ್ಕಾಗಿ ಬರೀ ಮೂರು ಗುಂಪು ಮಾಡಿ ಗೊಂದಲ ಸೃಷ್ಟಿಸಿ ಯಾರಿಗೂ ನ್ಯಾಯ ಸಿಗದಂತೆ ಮಾಡಿದರು. ಇದನ್ನು ನಾವು ಪದೇ ಪದೇ ಪ್ರಶ್ನೆ ಮಾಡಿದ್ದೆವು. ನ್ಯಾಯದ ಬದಲಿಗೆ ಅನ್ಯಾಯ ಮಾಡ್ತ ಇದ್ದೀರಿ ಎಂದು ತಿಳಿ ಹೇಳಿದೆವು. ಈಗ ಉತ್ತರ ಕೊಡಲಾರದ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ಆರೋಪಿಸಿದರು.

ಈಗ ತರಾತುರಿಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಶೇ 17 ಕ್ಕೆ ಸಹಿ ಹಾಕಿಸಿಕೊಂಡು ಬಂದಿದ್ದೀರಿ. ಈಗ ಅಷ್ಟೂ ಕೊಡಲು ಆಗಲ್ಲ. ನ್ಯಾಯಾಲಯದ ತಡೆ ಇದೆ ಅಂತೀರಿ. ಕೋರ್ಟ್ ತಡೆಯಾಜ್ಞೆಯನ್ನೇ ಕೊಟ್ಟಿಲ್ಲ. ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮಾಡಿದ ಅನ್ಯಾಯ. ಇವು ಕಾಂಗ್ರೆಸ್ ಸೃಷ್ಟಿಸಿದ ದೋಷ. ಮುಖ್ಯಮಂತ್ರಿಗಳು ಸುಳ್ಳು ಹೇಳುವುದರಲ್ಲಿ ನಿಪುಣರು. ಅವರು ಈಗ ಸಿಕ್ಕಿ ಬಿದ್ದಿದ್ದಾರೆ. ಒಳಮೀಸಲಾತಿ ಜಾರಿ ಮಾಡದಿದ್ದರೆ ಈ ಸರ್ಕಾರ ಉಳಿಯೋದಿಲ್ಲ ಎಂದರು.

ಶೇ 17 ಹೆಚ್ಚಸದೆ ಒಳಮೀಸಲಾತಿ ಜಾರಿ ಮಾಡಲು ಆಗಲ್ಲ. ಅದನ್ನು ಮುಟ್ಟಲು ಹೋದರೆ ಈಗ ಪರಿಶಿಷ್ಟ ಜಾತಿಗೆ ಕೊಟ್ಟಿರೋ ಶೇ7 ಮೀಸಲಾತಿಯನ್ನು ಅನೂರ್ಜಿತ ಮಾಡಿದ್ದೀರಿ. ಸರ್ಕಾರ ಒಂದರ ಮೇಲೆ ಒಂದು ತಪ್ಪು ಮಾಡುತ್ತಾ ಬರುತ್ತಿದೆ. ಜನ ಒಂದು ತಾಳ್ಮೆಯಿಂದ ಇರ್ತಾರೆ. ತಾಳ್ಮೆಯ ಕಟ್ಟೆ ಒಡೆದಾಗ ದೊಡ್ಡ ಆಂದೋಲನ ಸೃಷ್ಟಿ ಮಾಡಲಿದ್ದಾರೆ ಎಂದರು.

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಜನರನ್ನು ವಂಚನೆ ಮಾಡುತ್ತಾ ಬರುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ. ಬಿಜೆಪಿ ಕಾಲದಲ್ಲಿ ಯಾವ ರೀತಿ ನ್ಯಾಯ ಕೊಟ್ಟದ್ದೆವು ಎಂಬುದನ್ನೂ ತಿಳಿಸುತ್ತೇವೆ. ರಾಜ್ಯ ಮತ್ತು ಕೇಂದ್ರದ ಮುಖಂಡರು ಸೇರಿ ಚರ್ಚಿಸಿ ಆಂದೋಲನದ ರೂಪರೇಷೆ ಸಿದ್ಧಪಡಿಸುತ್ತೇವೆ. ಇಡೀ ರಾಜ್ಯದಲ್ಲಿ ಎಂದೂ ಕಂಡರಿಯದ ಆಂದೋಲನ ಮಾಡುತ್ತೇವೆ ಎಂದರು.

ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್‌ಗೆ ನೀತಿಪಾಠ ಹೇಳುವ ಕೆಲಸವನ್ನು ಮಾಡುತ್ತೇವೆ. ಯಾರನ್ನು ಓಟ್ ಬ್ಯಾಂಕ್ ಮಾಡಿಕೊಂಡು ವಂಚಿಸುತ್ತಾ ಬಂದಿದ್ದೀರೋ ಅವರ ಕೈನಲ್ಲೇ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.

ಸಂವಿಧಾನಬದ್ಧವಾಗಿ ಜಾರಿ ಮಾಡಿದ್ದೆವು: ಶ್ರೀರಾಮುಲು

ಈ ಹಿಂದೆ ಬಿಜೆಪಿ ಸರ್ಕಾರ ಮೀಸಲಾತಿಯನ್ನು ಜಾರಿ ಮಾಡುವಾಗ ಸಂವಿಧಾನ ಬದ್ಧವಾಗಿ ನಡೆದುಕೊಂಡಿತ್ತು. ನಮ್ಮ ಸರ್ಕಾರ ಇದ್ದಾಗ ನ್ಯಾಯಮೂರ್ತಿ ನಾಗಮೋಹಮ್ ದಾಸ್ ಅವರ ವರದಿಯನ್ನು ಸ್ವೀಕರಿಸಬೇಕಾದಾಗ ಉಪಸಮಿತಿ ಮಾಡಿದ್ದೆವು. ವರದಿಯನ್ನು ಪರಿಶೀಲಿಸಿ, ಚರ್ಚೆ ಮಾಡಿದ್ದೆವು. ಸಂಪುಟದಲ್ಲಿ ಚರ್ಚಿಸಿ ಸಂವಿಧಾನ ಬದ್ಧವಾಗಿ ಜಾರಿ ಮಾಡಿದ್ದೆವು. ಆದರೆ ಈಗ ಕಾಂಗ್ರೆಸ್ ಸರ್ಕಾರ ಮೀಸಲಾತಿ ಜಾರಿಯಲ್ಲಿ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರು ಆರೋಪಿಸಿದರು.

ನಾಗಮೋಹನ್ ದಾಸ್ ವರದಿಗೆ ಸರ್ವಪಕ್ಷಗಳ ಅಭಿಪ್ರಾಯವನ್ನೂ ಪಡೆದೆವು. ಆಗ ಜೆಡಿಎಸ್‌ನಿಂದ ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೆವು. ಸಿದ್ದರಾಮಯ್ಯ ಅವರು ಸಂಪೂರ್ಣ ಬೆಂಬಲ ನೀಡಿದ್ದರು. ಯಾವುದೇ ಅಭ್ಯಂತರ ಇಲ್ಲ. ಕಾನೂನು ಬದ್ಧವಾಗಿದೆ ಎಂದಿದ್ದರು. ಕಾನೂನು ಆಗಲು ಅಧಿವೇಶನ ಕರೆದೆ ಚರ್ಚೆ ಮಾಡಿದೆವು. ಕಾಂಗ್ರೆಸ್ ಮುಖಂಡರೂ ನಿಲುವು ತಿಳಿಸಿದರು ಎಂದರು.

ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಬೀದಿಗೆ ತರುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡ್ತ ಇದೆ. ಮಕ್ಕಳ ಭವಿಷ್ಯದ ಸಲುವಾಗಿ ಹೋರಾಟ ಮಾಡಬೇಕು. ಮೀಸಲಾತಿ ಜಾಸ್ತಿ ಮಾಡಿದ್ದನ್ನು ಕಾಂಗ್ರೆಸ್ ಕೆಡಿಸುತ್ತಿದೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ.
ಕೇಂದ್ರದ ಮಾಜಿ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ, ಮಾಜಿ ಸಂಸದರಾದ ಶ್ರೀ ಮುನಿಸ್ವಾಮಿ ಉಪಸ್ಥಿತರಿದ್ದರು.