ಪ್ರಶ್ನೆ ಪತ್ರಿಕೆ ಗೊಂದಲಕ್ಕೆ ಕಾರಣರಾದ ಕಾಲೇಜು ಅಧ್ಯಾಪಕರ ವಿರುದ್ಧ ಕಠಿಣ ಕ್ರಮ: ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಗೋಪಿನಾಥ್

ಶಿವಮೊಗ್ಗ: ಇಂದು ನಿಗದಿಯಾಗಿದ್ದ ಬಿ. ಎ. ಆರನೇ ಸೆಮೆಸ್ಟರ್ ಕನ್ನಡ ಐಚ್ಛಿಕ ಪತ್ರಿಕೆಯ ಪರೀಕ್ಷೆ ಯನ್ನು ಪ್ರಶ್ನೆ ಪತ್ರಿಕೆಯ ಗೊಂದಲದಿಂದ ಮುಂದೂಡಲಾಗಿದ್ದು, ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಅಂತ ಕುವೆಂಪು ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ ಗೋಪಿನಾಥ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕನ್ನಡ ವಿಷಯದ ಪರೀಕ್ಷಾ ಮಂಡಳಿಯ ಅಧ್ಯಕ್ಷರನ್ನು ಕರೆಸಿ ಪರೀಕ್ಷಾ ವಿಭಾಗದಲ್ಲಿ ವಿಚಾರಣೆ ನಡೆಸಿದ್ದು, ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ, ಪರಿಶೀಲನೆ ನಡೆಸಿದ ಅಧ್ಯಾಪಕರುಗಳು ಮತ್ತು ಅಧ್ಯಕ್ಷರು ಹೊಣೆಗಾರರಾಗಿರುತ್ತಾರೆ. ಈ ಕುರಿತು ಪರೀಕ್ಷಾ ಮಂಡಳಿಯ ಅಧ್ಯಕ್ಷರು ತಪ್ಪೊಪ್ಪಿಗೆಯ ಪತ್ರ ಸಲ್ಲಿಸಿದ್ದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

“ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶ್ವವಿದ್ಯಾಲಯದ ಘನತೆಗೆ ಕುಂದು ತಂದಿರುವ ಮತ್ತು ವಿದ್ಯಾರ್ಥಿಗಳಿಗೆ ತೊಡಕು ಉಂಟು ಮಾಡಿರುವ ಈ ಪ್ರಕರಣಕ್ಕೆ ಸಂಬಂಧಪಟ್ಟವರ ಮೇಲೆ ಪರೀಕ್ಷಾ ಕಾಯ್ದೆಯ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.