ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಸಚಿವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಕೋವಿಡ್ ಸೋಂಕು ಹತೋಟಿಯಲ್ಲಿದ್ದು ಜನರು ಆತಂಕಕ್ಕೆ ಒಳಗಾಗುವ ಸ್ಥಿತಿ ಇಲ್ಲ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಬಂದವರಲ್ಲಿ ಸಾವಿಗೀಡಾಗಿರುವ 11 ಜನರಲ್ಲಿ 10 ಜನರ ಡೆತ್ ಆಡಿಟ್ ರಿಪೋರ್ಟ್ ಬಂದಿದೆ. ಡೆತ್ ಆಡಿಟ್ ರಿಪೋರ್ಟ್ ಪ್ರಕಾರ 10 ಜನರು ಇತರ ಮಾರಕ ಕಾಯಿಲೆಗಳಾದ ಹೃದಯಸಂಬಂಧಿ, ಕಿಡ್ನಿ, ಅಂಗಾಂಗ ವೈಫಲ್ಯದಂತಹ ಕಾರಣಗಳಿಂದ ಸಾವನ್ನಪ್ಪಿದ್ದು, ಕೋವಿಡ್ ಕಾರಣವಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಒಬ್ಬರ ಡೆತ್ ಆಡಿಟ್ ರಿಪೋರ್ಟ್ ಬರುವುದು ಬಾಕಿ ಇದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಡೆತ್ ಆಡಿಟ್ ರಿಪೋರ್ಟ್ ಬಳಿಕವೇ ಕೋವಿಡ್ ಡೆತ್ ರಿಪೋರ್ಟ್ ಘೋಷಿಸುವಂತೆ ಇಂದು ನಡೆದ ಸಿಎಂ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋವಿಡ್ ಡೆತ್ ಎಂದಾಕ್ಷಣ ಅನಗತ್ಯವಾಗಿ ಜನರು ಆತಂಕಕ್ಕೆ ಒಳಗಾಗುವುದು ಸಹಜ.. ಆದರೆ ವಾಸ್ತವ ಚಿತ್ರಣ ಬೇರೆಯೇ ಆಗಿರುತ್ತದೆ. ಈಗಿರುವ ಕೋವಿಡ್ ರೂಪಾಂತರಿ ವೈರಸ್ ಸೌಮ್ಯ ಸ್ವಭಾವದ್ದಾಗಿದೆ. 500 ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ ಇಬ್ಬರು ಮಾತ್ರ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆತಂಕದ ಸ್ಥಿತಿ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಕಳೆದ 10 ದಿನಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕೋವಿಡ್ ಟೆಸ್ಟಿಂಗ್ ಮಾಡಲಾಗಿದೆ. SARI ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋಡಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ.. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ತಜ್ಞರ ಸಮಿತಿ ಸಭೆಗಳನ್ನ ನಡೆಸುತ್ತಿದ್ದು, ಆರೋಗ್ಯ ಇಲಾಖೆ ಕೂಡ ಮೇಲ್ವಿಚಾರಣೆ ನಡೆಸುತ್ತಿದೆ. ಕೋವಿಡ್ ಗೆ ಆತಂಕಗೊಳ್ಳದೇ ಜನರು ತಮ್ಮ ಸಹಜ ಜೀವನ ನಡೆಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.




