ಯುಜಿಸಿಇಟಿ: ಜುಲೈ 2ರಿಂದ 4ರವರೆಗೆ ಕೆಇಎಗೆ ಬಂದೇ ಸರಿಪಡಿಸಿಕೊಳ್ಳಬೇಕು-KEA

PGCET Counselling KEA gives the green signal to enter all four choices

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವವರಿಗೆ ಪರಿಶೀಲನಾ ಚೀಟಿ (ವೆರಿಫಿಕೇಷನ್ ಸ್ಲಿಪ್) ಯನ್ನು ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದ್ದು, ತಮ್ಮ ಕ್ಲೇಮ್ ಗಳಲ್ಲಿ ಲೋಪಗಳು ಆಗಿದ್ದಲ್ಲಿ ಜುಲೈ 2ರಿಂದ ಮೂರು ದಿನಗಳ ಕಾಲ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಮೀಸಲಾತಿ, ಪ್ರವರ್ಗ, ಗ್ರಾಮೀಣ, ಭಾಷಾ ಅಲ್ಪಸಂಖ್ಯಾತರ ಕೋಟಾ ಇತ್ಯಾದಿ ಕ್ಲೇಮ್ ಗಳನ್ನು ಸರಿಪಡಿಸಿಕೊಳ್ಳಬೇಕೆನ್ನುವವರಿಗೆ ತಿದ್ದುಪಡಿ ಮಾಡಿಕೊಳ್ಳಲು ಅಂತಿಮ ಅವಕಾಶ ನೀಡಲಾಗುವುದು. ಈ ಸಂಬಂಧ ಜೂನ್ 26ರಂದು ಸ್ಲಾಟ್ ಬುಕ್ಕಿಂಗ್ ಗೆ ವೆಬ್ ಸೈಟ್ ನಲ್ಲಿ ಲಿಂಕ್ ಬಿಡಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜುಲೈ 2ರಿಂದ 4ರವರೆಗೆ ಅಂತಹ ಅಭ್ಯರ್ಥಿಗಳು ಖುದ್ದು ಕೆಇಎ ಕಚೇರಿಗೆ ಬಂದೇ ದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗುತ್ತದೆ. ಬರುವುದಕ್ಕೂ ಮುನ್ಬ ಮುಂಗಡವಾಗಿ ದಿನಾಂಕ ನಿಗದಿಪಡಿಸಿಕೊಂಡೇ ಬರಬೇಕು ಎಂದು ಅವರು ವಿವರಿಸಿದ್ದಾರೆ.

ಇದುವರೆಗೂ ಕಾಲೇಜು ಹಂತದಲ್ಲಿ ದಾಖಲೆ ಪರಿಶೀಲನೆ‌ ಮಾಡಿಸಿಕೊಳ್ಳದೇ ಇರುವವರು ಕೂಡ ಈ ದಿನಗಳಂದು ಕೆಇಎ ಕಚೇರಿಗೆ ಬಂದು ಮಾಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.