ನವದೆಹಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ₹2,000 ವರೆಗಿನ ಯಾವುದೇ ಯುಪಿಐ (UPI) ಹಾಗೂ ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಬ್ಯಾಂಕ್ಗಳಾಗಲಿ ಅಥವಾ ಪಾವತಿ ಸೇವಾ ಪೂರೈಕೆದಾರರಾಗಲಿ ಯಾವುದೇ ನೇರ ಅಥವಾ ಪರೋಕ್ಷ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಕಾಯ್ದೆ ತಿದ್ದುಪಡಿ ಮೂಲಕ ಅಧಿಕೃತ ಅಧಿಸೂಚನೆ
ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ 2007ರ (Payment and Settlement Systems Act) ಅಡಿಯಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಹಣ ಪಾವತಿ ಮಾಡುವ ಗ್ರಾಹಕರು ಮಾತ್ರವಲ್ಲದೆ, ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳ ಮೇಲೂ ಯಾವುದೇ ಸೇವಾ ಶುಲ್ಕ ಅಥವಾ ಕಮಿಷನ್ ಹೇರುವಂತಿಲ್ಲ. ರುಪೇ ಡೆಬಿಟ್ ಕಾರ್ಡ್ ಮೂಲಕ ಸಣ್ಣ ಮೊತ್ತದ ಪಾವತಿ ಮಾಡುವವರಿಗೂ ಈ ರಿಯಾಯಿತಿ ಎಂದಿನಂತೆ ಲಭ್ಯವಾಗಲಿದೆ.
ದೊಡ್ಡ ಮೊತ್ತದ ವ್ಯಾಪಾರಿ ವಹಿವಾಟುಗಳಿಗೆ ಶುಲ್ಕದ ಸುಳಿವು
ಸದ್ಯದ ಅಧಿಸೂಚನೆಯಲ್ಲಿ ₹2,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ವಹಿವಾಟುಗಳ ಮೇಲೆ ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ವಿಧಿಸಬಹುದಾದ ಮುನ್ಸೂಚನೆ ಸಿಕ್ಕಿದೆ. ಆದರೆ ಈ ಶುಲ್ಕ ಎಷ್ಟು ಪ್ರಮಾಣದಲ್ಲಿರಲಿದೆ, ಯಾವ ಮಾದರಿಯಲ್ಲಿ ಜಾರಿಯಾಗಲಿದೆ ಎಂಬುದರ ಕುರಿತು ಸರ್ಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲದೆ, ಸಾಮಾನ್ಯ ಜನರು ಪರಸ್ಪರ ಮಾಡಿಕೊಳ್ಳುವ ಹಣ ವರ್ಗಾವಣೆಗೆ (P2P) ಯಾವುದೇ ಶುಲ್ಕ ವಿಧಿಸುವ ಪ್ರಸ್ತಾಪ ಇದರಲ್ಲಿ ಇಲ್ಲದಿರುವುದು ಬಳಕೆದಾರರಿಗೆ ಸಮಾಧಾನ ತಂದಿದೆ.
ದೈನಂದಿನ ಬಳಕೆದಾರರಿಗೆ ಸಿಗಲಿದೆ ನೆಮ್ಮದಿ
ದಿನಸಿ ಅಂಗಡಿಗಳು, ತರಕಾರಿ ಖರೀದಿ ಹಾಗೂ ಹೊಟೇಲ್ಗಳಲ್ಲಿ ನಡೆಯುವ ಬಹುತೇಕ ದೈನಂದಿನ ವಹಿವಾಟುಗಳು ₹2,000 ಒಳಗೇ ಇರುತ್ತವೆ. ಅಂಕಿಅಂಶಗಳ ಪ್ರಕಾರ ವ್ಯಾಪಾರಿಗಳಿಗೆ ನಡೆಯುವ ಒಟ್ಟು ಯುಪಿಐ ಪಾವತಿಗಳಲ್ಲಿ ₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳು ಕೇವಲ ಶೇಕಡ 4 ರಷ್ಟಿವೆ. ಆದರೆ ಒಟ್ಟು ಹಣದ ಮೌಲ್ಯದಲ್ಲಿ ಇವುಗಳ ಪಾಲು ಮೂರನೇ ಎರಡರಷ್ಟಿದೆ. ಹೀಗಾಗಿ ಸರ್ಕಾರ ಭವಿಷ್ಯದಲ್ಲಿ ಯಾವುದೇ ಶುಲ್ಕ ಜಾರಿಗೆ ತಂದರೂ, ಅದು ಕೇವಲ ದೊಡ್ಡ ಮೌಲ್ಯದ ವಾಣಿಜ್ಯ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಲಿದ್ದು, ಸಣ್ಣ ಬಳಕೆದಾರರಿಗೆ ತಕ್ಷಣಕ್ಕೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ.




