ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕನ್ನಡದ ಹಿರಿಯ ಸಾಹಿತಿ ಡಾ.ನಾ ಡಿಸೋಜ ಅವರ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಈ ಬಗ್ಗೆ ಪ್ರಜಾ ಕನ್ನಡಕ್ಕೆ ಕುಟುಂಬಸ್ಥರು ಮಾಹಿತಿ ನೀಡಿದ್ದು, ಮಂಗಳೂರಿನ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಇಂದು ಚಿಕಿತ್ಸೆ ಫಲಿಸದೇ ನಿಧರಾಗಿರುವುದಾಗಿ ತಿಳಿಸಿದ್ದಾರೆ.
ಮೃತ ಡಾ.ನಾಡಿಸೋಜ(87) ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಆಗಲಿದ್ದಾರೆ. ನಾ ಡಿಸೋಜ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಜನವರಿ.7ರಂದು ಕುಟುಂಬಸ್ಥರು ಸಾಗರದಲ್ಲಿ ನೆರವೇರಿಸಲಿದ್ದಾರೆ.
ನಾ ಡಿಸೋಜ ಬಗ್ಗೆ ಮಾಹಿತಿ
ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ.
ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.
ಪ್ರಾರಂಭದ ದಿನಗಳಲ್ಲಿ ‘ಪ್ರಪಂಚ’ ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ – ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40. ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯಗೊಂಡಿವೆ. ನಾ. ಡಿಸೋಜ ಅವರ ದ್ವೀಪ, ಮುಳುಗಡೆ, ಕಾಡಿನ ಬೆಂಕಿ, ಬಳುವಳಿ, ಬೆಟ್ಟದಪುರದ ದಿಟ್ಟ ಮಕ್ಕಳು, ಆಂತರ್ಯ ಕೃತಿಗಳು ಚಲನಚಿತ್ರಗಳಾಗಿ ತೆರೆಮೇಲೆಯೂ ಮೂಡಿನಿಂತು ಪ್ರಶಸ್ತಿ ಪುರಸ್ಕಾರಕ್ಕೂ ಭಾಜನವಾಗಿದೆ. ಮಕ್ಕಳ ಸಾಹಿತ್ಯದಲ್ಲಿ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ.
ಅಜ್ಞಾತ, ಒಂದು ಜಲಪಾತದ ಸುತ್ತ , ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಜೀವಕಳೆ, ಪ್ರೀತಿಯೊಂದೆ ಸಾಲದೇ?, ಬಂಜೆ ಬೆಂಕಿ, ಪ್ರಜ್ಞಾಬಲಿ, ನೆಲೆ, ನಡುವೆ ನಿಂತ ಜನ, ಗಾಂಧಿ ಬಂದರು, ಒಡ್ಡು, ಮಾನವ, ಮುಳುಗಡೆ, ವಿಷಾನಿಲ ಇನ್ನೂ ಅನೇಕ ಕಾದಂಬರಿಗಳನ್ನೊಳಗೊಂಡತೆ ಮಕ್ಳ ಸಾಹಿತ್ಯವನ್ನೂ, ರೇಡಿಯೋ ನಾಟಕಗಳನ್ನೂ ನಾ.ಡಿಸೋಜ ಅವರು ರಚಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗುಲ್ವಾಡಿ ವೆಂಕಟರಾವ ಪ್ರಶಸ್ತಿ ಪುತ್ತೂರು ನಿರಂಜನ ಸಾಹಿತ್ಯ ಪ್ರಶಸ್ತಿ ವರ್ಧಮಾನ ಪ್ರಶಸ್ತಿ ಮಾಸ್ತಿ ಪ್ರಶಸ್ತಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನವದೆಹಲಿ ಕಳಾ ಪ್ರಶಸ್ತಿ ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಶ್ರೀಯುತರು ಭಾಜನರಾಗಿದ್ದಾರೆ.




