ಸಾಗರ: ನಗರಸಭೆಯ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ನಗರದಲ್ಲಿ ಸ್ವಚ್ಛತೆ ಮಾಯವಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಮೇಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸಾಗರ ನಗರಸಭೆ ಆವರಣದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅವರ ನೇತೃತ್ವದಲ್ಲಿ ಬಿಜೆಪಿಯ ಧರಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು ಮಾತನಾಡಿದ ಅವರು, ನಗರಸಭೆಯ ಪ್ರಸ್ತುತ ದುಸ್ಥಿತಿ ಹಾಗೂ ಶಾಸಕರ ಆಡಳಿತ ವೈಫಲ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕಸದ ರಾಶಿಯಾಗಿ ಮಾರ್ಪಟ್ಟ ಶಾಶ್ವತ ಧ್ವಜಸ್ತಂಭದ ಆವರಣ
ಹಿಂದೆ ಶಾಸಕರಾಗಿದ್ದ ಹಾಲಪ್ಪನವರ ಅಧಿಕಾರದ ಅವಧಿಯಲ್ಲಿ ಸಾಗರ ನಗರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಮತ್ತು ಇಂದಿನ ಪರಿಸ್ಥಿತಿಯನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಸ್ಥಳವಾದ ಶಾಶ್ವತ ಧ್ವಜಸ್ತಂಭದ ಬಳಿ ಕಸದ ರಾಶಿ, ಪ್ಲಾಸ್ಟಿಕ್ ಚೀಲಗಳು ಲೋಡ್ಗಟ್ಟಲೆ ಬಿದ್ದಿದ್ದು, ಕೊಳೆತು ನಾರುತ್ತಿದೆ. ಹಿಂದೆ ಕೆರೆಯಪ್ಪ ಸಮ್ಮೇಳನ, ಅಡಿಕೆ ಬೆಳೆಗಾರರ ಸಮಾವೇಶ ಹಾಗೂ ಶಾಸಕರ ಮಕ್ಕಳ ವಿವಾಹದಂತಹ ಬೃಹತ್ ಕಾರ್ಯಕ್ರಮಗಳು ನಡೆದು 10 ರಿಂದ 25 ಸಾವಿರ ಜನರು ಸೇರುತ್ತಿದ್ದ ಸ್ಥಳದಲ್ಲಿ, ಇಂದು ಕಾಲಿಡಲೂ ಸಾಧ್ಯವಾಗದಷ್ಟು ಕೊಳಕು ವಾತಾವರಣ ನಿರ್ಮಾಣವಾಗಿದೆ. ಶಾಸಕರು ಇಂತಹ ಗಂಭೀರ ಸಮಸ್ಯೆಯನ್ನು ಗಮನಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ದೂರಿದರು.
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಾರ್ವಜನಿಕರಿಗೆ ಸಿಗದ ಕಮಿಷನರ್
ಹಾಲಪ್ಪನವರ ಅವಧಿಯಲ್ಲಿ 31 ವಾರ್ಡ್ಗಳಲ್ಲೂ ರಸ್ತೆ, ಚರಂಡಿ, ಪೈಪ್ಲೈನ್ ಮತ್ತು ಪಾರ್ಕ್ ಅಭಿವೃದ್ಧಿ ಸಮಾನವಾಗಿ ನಡೆದಿತ್ತು. ಆದರೆ ಇಂದು ನಗರಸಭೆಯ ಯಾವುದೇ ಅಧಿಕಾರಿಯನ್ನು ಪ್ರಶ್ನಿಸಿದರೂ ಕಮಿಷನರ್ ಕಡೆಗೆ ಕೈ ತೋರಿಸುತ್ತಾರೆ. ದಿನಕರ, ರಾಜೇಶ್, ಮದನ್ ಅಥವಾ ಪರಿಸರ ಎಂಜಿನಿಯರ್ ಯಾರೇ ಆಗಿರಲಿ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಾಗಿರಲಿ, ಜನಪ್ರತಿನಿಧಿಗಳಾದ ನಾವು ತುರ್ತು ಸಂದರ್ಭಗಳಲ್ಲಿ ಕರೆ ಮಾಡಿದರೂ ನಗರಸಭೆ ಕಮಿಷನರ್ ನಾಗಪ್ಪನವರು ಫೋನ್ ಸ್ವೀಕರಿಸುವುದಿಲ್ಲ. ಹಿಂದೆ ಪ್ರಭಾಕರ್ ಅವರಂತಹ ಅಧಿಕಾರಿಗಳಿದ್ದಾಗ ನಗರವನ್ನು ಸುಂದರವಾಗಿಡಲು ಬೆಳಿಗ್ಗೆಯೇ ಫೀಲ್ಡ್ಗೆ ಬಂದು ಕೆಲಸ ಮಾಡುತ್ತಿದ್ದರು. ಆದರೆ ಇಂದಿನ ಎಇಇ ಮದನ್ ಸೇರಿದಂತೆ ಅಧಿಕಾರಿಗಳು ವಾರ್ಡ್ಗಳಿಗೆ ಭೇಟಿ ನೀಡುವುದೇ ಇಲ್ಲ; ಇನ್ಸರ್ಟ್ ಮಾಡಿಕೊಂಡು ರಸ್ತೆ ಹಾಗೂ ನಗರಸಭೆ ಕಚೇರಿ ಸುತ್ತು ಹಾಕುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಯಾರಾದರೂ ಸಮಸ್ಯೆ ಹೇಳಿದರೆ ಉದ್ದೇಶಪೂರ್ವಕವಾಗಿ ಆ ವಾರ್ಡ್ಗಳ ಸ್ವಚ್ಛತೆ ಮಾಡದೆ ಸತಾಯಿಸಲಾಗುತ್ತಿದೆ ಎಂದು ಆಪಾದಿಸಿದರು.
ಅವಧಿ ಮುಗಿದರೂ ಅಭಿವೃದ್ಧಿ ಶೂನ್ಯ; ಕೇವಲ ಪೂಜೆಗೆ ಸೀಮಿತ
ನಗರಸಭೆ ಕೌನ್ಸಿಲರ್ಗಳ ಅವಧಿ ಮುಗಿದು ಇನ್ನೇನು ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ ಈ ಒಂದು ವರ್ಷದ ಅವಧಿಯಲ್ಲಿ ಯಾವುದೇ ವಾರ್ಡ್ನಲ್ಲೂ ಒಂದು ಸಣ್ಣ ರಸ್ತೆ ಅಥವಾ ಚರಂಡಿ ಕೆಲಸವಾಗಿಲ್ಲ. ಶಾಸಕರು ಆಯ್ಕೆಯಾದ ನಂತರ ನಗರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ; ನಗರಸಭೆ ಜನರಲ್ ಫಂಡ್ ಅಥವಾ 15ನೇ ಹಣಕಾಸು ಯೋಜನೆಯಡಿ ಹಳೆಯ ಕಾಮಗಾರಿಗಳು ನಡೆದಿವೆ ಹೊರತು ಹೊಸ ಯೋಜನೆಗಳಿಲ್ಲ. ಬರೀ ಪ್ರೆಸ್ಮೀಟ್ ಮಾಡುವುದು ಮತ್ತು ಗುದ್ದಲಿಪೂಜೆ ನೆರವೇರಿಸುವುದಷ್ಟೇ ಇವರ ಸಾಧನೆಯಾಗಿದೆ. ಇತ್ತೀಚೆಗೆ ಬಸ್ ನಿಲ್ದಾಣದ ಬಳಿ ಫುಡ್ ಕೋರ್ಟ್ಗೆ ಗುದ್ದಲಿಪೂಜೆ ಮಾಡಲಾಗಿದ್ದು, ಅದು ಆರಂಭವಾಗಲು ಇನ್ನೂ ಆರು ತಿಂಗಳು ಬೇಕಾಗಬಹುದು. ನಗರದ ಪ್ರಮುಖ ಜಾಗದಲ್ಲಿ ಫುಡ್ ಕೋರ್ಟ್ ನಿರ್ಮಿಸುವ ಅಗತ್ಯವೇನಿತ್ತು? ಬೈಕ್, ಕಾರುಗಳಲ್ಲಿ ತೆರಳುವಾಗ ಅಥವಾ ಶಾಲಾ-ಕಾಲೇಜು ಮಕ್ಕಳು ಓಡಾಡುವಾಗ ಕಾರದ ಪುಡಿ ಮುಖಕ್ಕೆ ಬಡಿದು ಅಪಘಾತ ಸಂಭವಿಸುವ ಅಪಾಯವಿದೆ. ಜನರ ಹಿತದೃಷ್ಟಿಯಿಂದ ಯೋಜಿಸದೆ ಹಿಂಬಾಲಕರ ಮಾತು ಕೇಳಿ ಆಡಳಿತ ನಡೆಸಲಾಗುತ್ತಿದೆ.
ಉಗ್ರ ಹೋರಾಟದ ಎಚ್ಚರಿಕೆ
ಹಿಂದೆ ಹಾಲಪ್ಪನವರು ಪ್ರಮುಖರನ್ನು ಮತ್ತು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಆಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಮುಂದಿನ ದಿನಗಳಲ್ಲಾದರೂ ಆಡಳಿತ ಎಚ್ಚೆತ್ತುಕೊಂಡು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿದ್ದರೆ, ನಗರಸಭೆ ಹಾಗೂ ಶಾಸಕರ ವೈಫಲ್ಯದ ವಿರುದ್ಧ ಉಗ್ರವಾದ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಶ್ರೀನಿವಾಸ ಮೇಸ್ತ್ರಿ ಎಚ್ಚರಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು..




