ಹೈದರಾಬಾದ್: ಡಿಸೆಂಬರ್ 11ರಿಂದ 22ರವರೆಗೆ ತೆಲಂಗಾಣದಾದ್ಯಂತ ನಡೆಯಲಿರುವ 8ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಸಿದ್ಧತೆಗಳನ್ನು ಬಿಗಿಯಾಗಿ ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೈದರಾಬಾದ್ನ ಎಂಸಿಆರ್ ಮಾನವ ಸಂಪನ್ಮೂಲ ಅಭಿವೃದ್ಧಿ ಭವನದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯುವ ಕ್ರೀಡಾಪಟುಗಳ ಪ್ರತಿಭೆ ಗುರುತಿಸಲು ಮತ್ತು ಅವರಿಗೆ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಹಾಗೂ ಮೂಲಸೌಕರ್ಯ ಒದಗಿಸಲು ಈ ಕ್ರೀಡಾಕೂಟವನ್ನು ಬಳಸಿಕೊಳ್ಳಬೇಕು ಎಂದರು.
ಹೈದರಾಬಾದ್ ಸೇರಿದಂತೆ ಆರು ನಗರಗಳ 20 ಸ್ಥಳಗಳಲ್ಲಿ ಗುಣಮಟ್ಟದ ಕ್ರೀಡಾ ಸೌಲಭ್ಯ ಅಭಿವೃದ್ಧಿಪಡಿಸುವಂತೆ ಸೂಚಿಸಿದರು. ಕ್ರೀಡಾಪಟುಗಳಿಗೆ ವಸತಿ ಸೇರಿದಂತೆ ಯಾವುದೇ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಮೇಲ್ವಿಚಾರಣೆಗೆ ಗ್ರೂಪ್-1 ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲು ಆದೇಶಿಸಿದರು. ಪ್ರತಿ ವಾರ ಪ್ರಗತಿ ವರದಿ ಸಲ್ಲಿಸುವಂತೆಯೂ ಸೂಚಿಸಿದರು.
ತೆಲಂಗಾಣದ ಸಾಂಪ್ರದಾಯಿಕ ಕ್ರೀಡೆಯಾದ ಕರ್ರಾ ಸಮುವನ್ನು ಆತಿಥೇಯ ರಾಜ್ಯದ ಕಾರ್ಯಕ್ರಮದಲ್ಲಿ ಸೇರಿಸಲು ಸಲಹೆ ನೀಡಿದರು. ಕ್ರೀಡಾಕೂಟದಲ್ಲಿ 27 ಕ್ರೀಡಾ ವಿಭಾಗಗಳು ಹಾಗೂ ಒಂದು ಪ್ರದರ್ಶನ ವಿಭಾಗ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಸಾವಿರಾರು ಯುವ ಕ್ರೀಡಾಪಟುಗಳು ಮತ್ತು ಸುಮಾರು 2,000 ತರಬೇತುದಾರರು, ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಒಲಿಂಪಿಕ್ಸ್ ಸೇರಿದಂತೆ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಕ್ರೀಡಾಪಟುಗಳನ್ನು ಸಿದ್ಧಪಡಿಸುವ ರಾಜ್ಯದ ಗುರಿಗೆ ಈ ಕ್ರೀಡಾಕೂಟ ನೆರವಾಗಬೇಕು. ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಅನಗತ್ಯ ವೆಚ್ಚ ತಪ್ಪಿಸುವಂತೆಯೂ ಮುಖ್ಯಮಂತ್ರಿ ಸೂಚಿಸಿದರು.



