ಹೈದರಾಬಾದ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಮೂಲಕ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ಸೋಮವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್ಐಆರ್ ಪ್ರಕ್ರಿಯೆ ಬಿಜೆಪಿ ಚುನಾವಣಾ ಗೆಲುವಿಗೆ ನೆರವಾಗಲಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟೀಕೆಯನ್ನು ತಳ್ಳಿಹಾಕಿದರು.

2014 ಮತ್ತು 2019ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಎಸ್ಐಆರ್ ನಡೆದಿರಲಿಲ್ಲ. ಆದರೂ ಬಿಜೆಪಿ ಗೆಲುವು ಸಾಧಿಸಿತ್ತು ಎಂದು ಅವರು ಪ್ರತಿಪಾದಿಸಿದರು. 2024ರ ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರ, ಹರಿಯಾಣ, ದೆಹಲಿ ಮತ್ತು ಬಿಹಾರಗಳಲ್ಲಿ ಪಕ್ಷದ ಸಾಧನೆಯನ್ನು ಉಲ್ಲೇಖಿಸಿದರು.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ ಶಾ, ಅವರ ರಾಜಕೀಯ ಸ್ಥಾನಮಾನ ದುರ್ಬಲಗೊಂಡಿದೆ ಎಂದು ಹೇಳಿದರು.



