ಮಹಾಕುಂಭಮೇಳದಲ್ಲಿ ಕಾಲ್ತುಳಿತ: 30 ಭಕ್ತರು ಸಾವು, 90 ಮಂದಿಗೆ ಗಾಯ

ಉತ್ತರ ಪ್ರದೇಶ: ಇಂದು ಮುಂಜಾನೆ ಮಹಾಕುಂಭದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ 30 ಭಕ್ತರು ಸಾವನ್ನಪ್ಪಿದ್ದಾರೆ. ಅರವತ್ತು ಜನರು ಗಾಯಗೊಂಡಿದ್ದಾರೆ. 25 ಸಂತ್ರಸ್ತರನ್ನು ಗುರುತಿಸಲಾಗಿದ್ದು, ಉಳಿದ ಐವರನ್ನು ಇನ್ನೂ ಗುರುತಿಸಲಾಗುತ್ತಿದೆ ಎಂದು ಮಹಾಕುಂಭದ ಡಿಐಜಿ ವೈಭವ್ ಕೃಷ್ಣ ದೃಢಪಡಿಸಿದ್ದಾರೆ.

ಏನಾಯಿತು

ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಸಂಗಮದಲ್ಲಿ ಕಾಲ್ತುಳಿತದಂತಹ ಘಟನೆ ಸಂಭವಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಪ್ರಧಾನಿ ಮೋದಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುವಲ್ಲಿ ತೊಡಗಿದೆ ಎಂದು ಹೇಳಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಕೆಲವು ಭಕ್ತರಿಗೆ ಗಂಭೀರ ಗಾಯಗಳಾಗಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಯುಪಿ ಸರ್ಕಾರ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅವರು “ದುರಾಡಳಿತ” ಮತ್ತು “ವಿಐಪಿ ಸಂಸ್ಕೃತಿ” ಎಂದು ಆರೋಪಿಸಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಏನು?

ಜ್ಯೋತಿಶ್ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಶೃಂಗೇರಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ವಿಧುಶೇಖರ ಭಾರತಿ ಮತ್ತು ಇತರ ಮಠಾಧೀಶರು ಎರಡನೇ ಅಮೃತ ಸ್ನಾನಕ್ಕಾಗಿ ಸಂಗಮಕ್ಕೆ ಆಗಮಿಸಿದರು.

ಪೊಲೀಸರು ಅಖಾಡಗಳಿಗೆ ದಾರಿ ಮಾಡಿಕೊಟ್ಟಿದ್ದರಿಂದ ಸಂಗಮದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.