ನಟ ದರ್ಶನ್​ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ; ಹೈಕೋರ್ಟ್ ಆದೇಶ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ತಾತ್ಕಾಲಿಕ ಜಾಮೀನಿನಲ್ಲಿ ಬಿಡುಗಡೆಯಾಗಿರುವ ನಟ ದರ್ಶನ್​ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಿದೆ.

ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ನ್ಯಾಯಾಲಯ ತಾತ್ಕಾಲಿಕ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಅವಧಿ ಡಿಸೆಂಬರ್​ 11ಕ್ಕೆ ಅಂತ್ಯವಾಗುವ ಹಿನ್ನೆಲೆಯಲ್ಲಿ ವಿಸ್ತರಣೆಗಾಗಿ ದರ್ಶನ್ ಹೈಕೋರ್ಟಿಗೆ ಮನವಿ ಮಾಡಿದ್ದರು. ದರ್ಶನ್ ಅವರ ಪರವಾಗಿ ವಾದ ಮಂಡಿಸಿದ ವಕೀಲ ಸಿ.ವಿ. ನಾಗೇಶ್, ನಟನಿಗೆ ರಕ್ತದೊತ್ತಡ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆ ಇನ್ನೂ ನಡೆಸಿಲ್ಲ ಎಂದು ನ್ಯಾಯಪೀಠದ ಗಮನಸೆಳೆದರು. ಡಿಸೆಂಬರ್​ 11ಕ್ಕೆ ದರ್ಶನ್ ಅವರ ಶಸ್ತ್ರ ಚಿಕಿತ್ಸೆಗೆ ದಿನಾಂಕ ನಿಗದಿ ಆಗಿದೆ ಎಂದೂ ಮಾಹಿತಿ ನೀಡಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ದರ್ಶನ್ ಅವರ ರೆಗ್ಯುಲರ್​ ಬೇಲ್ ಕುರಿತ ಆದೇಶವನ್ನು ಹೈಕೋರ್ಟ್​ ಕಾಯ್ದಿರಿಸಿರುವುದರಿಂದ, ಆ ಸಂಬಂಧದ ಆದೇಶ ಪ್ರಕಟವಾಗುವವರೆಗೂ ಮಧ್ಯಂತರ ಜಾಮೀನು ಅವಧಿ ಮುಂದುವರಿಸಿ ಆದೇಶಿಸಿದೆ.