ಮೈಸೂರು: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ‘ಗಾನಕೋಗಿಲೆ’ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವು ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿ ಭಾನುವಾರ ಶಾಸ್ತ್ರೋಕ್ತವಾಗಿ ನೆರವೇರಿತು. ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ಜರುಗಿದ್ದು, ಮೈಸೂರು ಜಿಲ್ಲಾಡಳಿತದ ವತಿಯಿಂದ ಸಕಲ ಪೊಲೀಸ್ ಗೌರವಗಳನ್ನು ಸಲ್ಲಿಸುವ ಮೂಲಕ ಸಂಗೀತ ಲೋಕದ ಮಹಾನ್ ಚೇತನಕ್ಕೆ ಭಾವುಕ ವಿದಾಯ ಹೇಳಲಾಯಿತು.
ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮೊಮ್ಮಗಳು ಅಪ್ಸರಾ:
ಎಸ್. ಜಾನಕಿ ಅವರ ಪತಿ ರಾಮಪ್ರಸಾದ್ ಅವರು 1997 ರಲ್ಲೇ ನಿಧನರಾಗಿದ್ದರು. ತದನಂತರ ಅವರ ಏಕೈಕ ಪುತ್ರ ಮುರಳಿ ಕೃಷ್ಣ ಅವರು ಕೂಡ ಇದೇ ವರ್ಷ (2026) ಜನವರಿ 22 ರಂದು ದಿಢೀರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಕುಟುಂಬದಲ್ಲಿ ಯಾವುದೇ ಪುರುಷ ವಾರಸುದಾರರು ಇಲ್ಲದ ಹಿನ್ನೆಲೆಯಲ್ಲಿ, ಮುರಳಿ ಕೃಷ್ಣ ಅವರ ಪುತ್ರಿ (ಎಸ್. ಜಾನಕಿ ಅವರ ಮೊಮ್ಮಗಳು) ಅಪ್ಸರಾ ಅವರೇ ಮುಂದೆ ನಿಂತು ಅಜ್ಜಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಲ್ಲದೆ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಆದರ್ಶಮಯ ದಾಂಪತ್ಯ ಜೀವನ:
ಎಸ್. ಜಾನಕಿ ಅವರು ವೇದಿಕೆಯೊಂದರಲ್ಲಿ ಹಾಡುತ್ತಿದ್ದಾಗ ಅವರನ್ನು ಮೊದಲ ಬಾರಿಗೆ ನೋಡಿದ್ದ ರಾಮಪ್ರಸಾದ್, ನಂತರ ಕುಟುಂಬದ ಮೂಲಕ ಸ್ನೇಹ ಬೆಳೆಸಿದ್ದರು. ಆ ಸ್ನೇಹವು ಪ್ರೀತಿಗೆ ತಿರುಗಿ 1956ರಲ್ಲಿ ಜಾನಕಿ ಅವರು ತಮ್ಮ 18ನೇ ವಯಸ್ಸಿನಲ್ಲಿ ರಾಮಪ್ರಸಾದ್ ಅವರೊಂದಿಗೆ ವಿವಾಹವಾದರು. ಜಾನಕಿ ಅವರು ಪ್ರೀತಿಯಿಂದ ‘ರಾಮು’ ಎಂದೇ ಕರೆಯುತ್ತಿದ್ದ ಪತಿ ರಾಮಪ್ರಸಾದ್, ಜಾನಕಿ ಅವರ ಸಂಗೀತ ವೃತ್ತಿಬದುಕಿಗೆ ಹೆಗಲಿಗೆ ಹೆಗಲಾಗಿ ನಿಂತು ಸದಾ ಪ್ರೋತ್ಸಾಹ ನೀಡಿದ್ದರು. 1997ರಲ್ಲಿ ಅವರು ಕಣ್ಣು ಮುಚ್ಚುವವರೆಗೂ ಈ ದಂಪತಿ ಅತ್ಯಂತ ಆದರ್ಶಮಯ ಜೀವನ ನಡೆಸಿದ್ದರು.
2017ರಲ್ಲಿ ಸಂಗೀತ ಯಾನಕ್ಕೆ ವಿದಾಯ:
ಕನ್ನಡ ಸೇರಿದಂತೆ ಇಡೀ ದಕ್ಷಿಣ ಭಾರತದಾದ್ಯಂತ ಸಾವಿರಾರು ಮಧುರ ಗೀತೆಗಳಿಗೆ ಧ್ವನಿಯಾಗಿದ್ದ ಎಸ್ ಜಾನಕಿ ಅವರು, 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಧಿಕೃತವಾಗಿ ಹಾಡುವುದಕ್ಕೆ ವಿದಾಯ ಘೋಷಿಸಿದ್ದರು. ಮಲಯಾಳಂನ ’10 ಕಲ್ಪನಕಳ್’ ಚಿತ್ರದ ‘ಅಮ್ಮ ಪೂವಿನುಂ’ ಎಂಬ ಜೋಗುಳ ಗೀತೆಯೇ ಅವರ ಕಂಠದಲ್ಲಿ ಮೂಡಿಬಂದ ಕೊನೆಯ ಹಾಡಾಗಿದೆ.
ಸಂಗೀತ ಲೋಕದ ಧ್ರುವತಾರೆಯಾಗಿದ್ದ ಜಾನಕಮ್ಮ ಇಂದು ನೆನಪು ಮಾತ್ರ. ಅವರ ಗಾಯನ ಸದಾ ಭಾರತೀಯರ ಹೃದಯದಲ್ಲಿ ಅಮರವಾಗಿರುತ್ತದೆ.




