ಬೆಂಗಳೂರು: ಕೆ ಎಸ್ ಆರ್ ಟಿ ಸಿ ದಸರಾ ವಿಶೇಷ ಸಂದರ್ಭದಲ್ಲಿ ವಿಶೇಷ ಪ್ರಯಾಣ ದರ ಆಕರಣೆ ಕಳೆದ 20 ವರುಷಗಳಿಂದ ನಿರ್ದಿಷ್ಟ ದಿವಸಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂಬುದಾಗಿ ನಿಗಮ ಸ್ಪಷ್ಟ ಪಡಿಸಿದೆ.
ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚಿಸಲು ಅವಕಾಶವಿರುತ್ತದೆ ಎಂದಿದೆ.
ಸದರಿ ದಿನಗಳಂದು ವಿಶೇಷ ಸಾರಿಗೆಗಳನ್ನು ಏಕಮುಖ ಸಾರಿಗೆಗಳಾಗಿ(One way) ಆಚರಣೆ ಮಾಡಿ ವಾಪಾಸ್ಸು (Return) ಬರುವಾಗ ಖಾಲಿ/ಕಡಿಮೆ ಪ್ರಯಾಣಿಕರಿಂದ ಕಾರ್ಯಾಚರಣೆ ಮಾಡಬೇಕಾಗಿರುವುದರಿಂದ ಹಾಗೂ ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಈ ಮಾರ್ಗಗಳಲ್ಲಿ ಆಚರಣೆ ಮಾಡುವುದರಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದೆ.
ಅದರಂತೆ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ಅವಧಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರಗಳನ್ನು ಆಕರಣೆ ಮಾಡಲಾಗುತ್ತಿದೆ ಎಂದಿದೆ.
ಅದರಂತೆ, ಈ ವರ್ಷವು 2025ರ ದಸರಾ ಅವಧಿಯಲ್ಲಿ ದಿನಾಂಕ: 26/09/2025 ರಿಂದ 08/10/2025 ರವರೆಗೆ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರ ಆಕರಣೆಗಳನ್ನು ಜಾರಿ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.




