ಹ್ಯಾಪಿಯೆಸ್ಟ್ ಹೆಲ್ತ್ ನಾಲೆಡ್ಜ್ ಬಿಸಿನೆಸ್ ನೂತನ ಸಿಇಒ ಆಗಿ ರಘು ಕೃಷ್ಣನ್ ಅಧಿಕಾರ ಸ್ವೀಕಾರ

ಬೆಂಗಳೂರು: ವೈದ್ಯಕೀಯ ಲೋಕದ ವಿಶ್ವಾಸಾರ್ಹ ಹಾಗೂ ವೈಜ್ಞಾನಿಕ ಆಧಾರಿತ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪಿಸುತ್ತಿರುವ ‘ಹ್ಯಾಪಿಯೆಸ್ಟ್ ಹೆಲ್ತ್’ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಸಂಸ್ಥೆಯ ಭವಿಷ್ಯದ ಆಡಳಿತಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ‘ನಾಲೆಡ್ಜ್ ಬಿಸಿನೆಸ್’ (ಜ್ಞಾನ ವಿಭಾಗ) ಮಾರುಕಟ್ಟೆಗೆ ಹೊಸ ನಾಯಕತ್ವವನ್ನು ಘೋಷಿಸಲಾಗಿದ್ದು, ಹಿರಿಯ ಪತ್ರಕರ್ತ ರಘು ಕೃಷ್ಣನ್ ಅವರನ್ನು ನೂತನ ಸಿಇಒ ಹಾಗೂ ಮುಖ್ಯ ಸಂಪಾದಕರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಸಂಸ್ಥೆಯು ಅಧಿಕೃತವಾಗಿ ಪುಸ್ತಕ ಪ್ರಕಾಶನ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದೆ.

ಕಳೆದ 2022ರಲ್ಲಿ ಆರಂಭವಾದ ಹ್ಯಾಪಿಯೆಸ್ಟ್ ಹೆಲ್ತ್‌ನ ಜ್ಞಾನ ವಿಭಾಗವು, ತನ್ನ ಅಧಿಕೃತ ವೆಬ್‌ಸೈಟ್, ನಿರಂತರವಾಗಿ ಓದುಗರನ್ನು ತಲುಪುವ ‘ಹೆಲ್ತ್‌ಜೀನ್’ ಇ-ಮೇಲ್ ಆವೃತ್ತಿ, ಮುದ್ರಿತ ಮಾಸಿಕ ನಿಯತಕಾಲಿಕೆ ಮತ್ತು ಆರೋಗ್ಯ ಶೃಂಗಸಭೆಗಳ ಮೂಲಕ ಅತ್ಯುನ್ನತ ಗುಣಮಟ್ಟದ ಆರೋಗ್ಯ ರಕ್ಷಣೆಯ ಜ್ಞಾನವನ್ನು ಪಸರಿಸುತ್ತಿದೆ. ಪ್ರಸ್ತುತ ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್ ಜಾಗತಿಕ ಮಟ್ಟದಲ್ಲೂ ಓದುಗರ ಅಪಾರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ.

ಡಿಜಿಟಲ್ ಹಾಗೂ ಪ್ರಕಾಶನ ವಿಭಾಗಗಳ ಏಕೀಕರಣ:

ಸಂಸ್ಥೆಯ ಈ ನೂತನ ಮೈಲಿಗಲ್ಲಿನ ಕುರಿತು ಹ್ಯಾಪಿಯೆಸ್ಟ್ ಹೆಲ್ತ್‌ನ ಚೇರ್ಮನ್ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ಅಶೋಕ್ ಸೂಟಾ ಅವರು ಪ್ರಕಟಣೆ ಹೊರಡಿಸಿದ್ದಾರೆ. “ಹ್ಯಾಪಿಯೆಸ್ಟ್ ಹೆಲ್ತ್ ಮ್ಯಾಗಜೀನ್ ಅನ್ನು ಅತ್ಯಂತ ನಂಬಲರ್ಹ ಪತ್ರಿಕೆಯನ್ನಾಗಿ ರೂಪಿಸುವಲ್ಲಿ ರಘು ಕೃಷ್ಣನ್ ಅವರ ಪಾತ್ರ ದೊಡ್ಡದಿದೆ. ಈಗ ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಡಿಜಿಟಲ್ ಇ-ಜ಼ೀನ್ ಹಾಗೂ ಮುದ್ರಿತ ಪತ್ರಿಕೆ ಎರಡರ ಸಂಪಾದಕೀಯ ವಿಭಾಗವನ್ನೂ ಅವರ ನಾಯಕತ್ವದಡಿಯಲ್ಲೇ ತರಲಾಗಿದೆ. ಇದರ ಜೊತೆಗೆ ಹೊಸದಾಗಿ ಆರಂಭಿಸಲಾಗಿರುವ ಪುಸ್ತಕ ಪ್ರಕಾಶನ ವಿಭಾಗವನ್ನೂ ರಘು ಅವರೇ ಮುನ್ನಡೆಸಲಿದ್ದು, ಇವರ ಅನುಭವವು ನಮ್ಮ ಜ್ಞಾನ ವಿಭಾಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳಿಗೆ ಬ್ರೇಕ್: ವೈಜ್ಞಾನಿಕ ಅರಿವೇ ಗುರಿ:

ತಮ್ಮ ಹೊಸ ಹೊಣೆಗಾರಿಕೆಯ ಕುರಿತು ಮಾತನಾಡಿದ ನಾಲೆಡ್ಜ್ ಬಿಸಿನೆಸ್‌ನ ನೂತನ ಸಿಇಒ ರಘು ಕೃಷ್ಣನ್, “ಜನರಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ, ಸಂಪೂರ್ಣ ನಿಖರವಾದ ಹಾಗೂ ವಿಜ್ಞಾನ ಆಧಾರಿತ ವೈದ್ಯಕೀಯ ಮಾಹಿತಿಯನ್ನು ಒದಗಿಸಿ ಅವರ ಬದುಕನ್ನು ಉತ್ತಮಪಡಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ. ಸಂಸ್ಥೆಯ ಸಂಪಾದಕೀಯ ವೇದಿಕೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಮುಂದಿನ ಹಂತದ ಬೆಳವಣಿಗೆಗೆ ಶ್ರಮಿಸಲು ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನಾವು ‘ಸೆಲ್ಫ್-ಪಬ್ಲಿಷಿಂಗ್ ಪ್ಲಾಟ್‌ಫಾರ್ಮ್’ ಮೂಲಕ ಪುಸ್ತಕ ಪ್ರಕಾಶನ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಈಗಾಗಲೇ ಕೆಲವು ಅತ್ಯುತ್ತಮ ಕೃತಿಗಳು ಬಿಡುಗಡೆಗೆ ಸಿದ್ಧಗೊಂಡಿವೆ. ಸಾಮಾನ್ಯ ಓದುಗರು ಹಾಗೂ ವೈದ್ಯಕೀಯ ಕ್ಷೇತ್ರದ ವೃತ್ತಿಪರರು ಇಬ್ಬರಿಗೂ ಏಕಕಾಲದಲ್ಲಿ ಪ್ರಯೋಜನಕ್ಕೆ ಬರುವಂತಹ ಒಂದು ಬಲಿಷ್ಠ ಆರೋಗ್ಯ ಜ್ಞಾನದ ವ್ಯವಸ್ಥೆಯನ್ನು ರೂಪಿಸುವ ನಮ್ಮ ಪ್ರಯತ್ನ ನಿರಂತರವಾಗಿರಲಿದೆ” ಎಂದು ಭರವಸೆ ನೀಡಿದ್ದಾರೆ.

ಇಂಟರ್ನೆಟ್‌ನಲ್ಲಿ ಹರಡುವ ಆರೋಗ್ಯ ಸಂಬಂಧಿ ತಪ್ಪು ಮಾಹಿತಿಗಳು ಮತ್ತು ಅರೆಬರೆ ಜ್ಞಾನಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಿ, ನುರಿತ ವೈದ್ಯಕೀಯ ತಜ್ಞರಿಂದ ಪ್ರಮಾಣೀಕರಿಸಲ್ಪಟ್ಟ ನಿಖರ ವಿಚಾರಗಳನ್ನು ಡಿಜಿಟಲ್ ಮಾಧ್ಯಮಗಳು ಹಾಗೂ ಕೃತಿಗಳ ಮೂಲಕ ಸಾರ್ವಜನಿಕರಿಗೆ ತಲುಪಿಸಲು ಹ್ಯಾಪಿಯೆಸ್ಟ್ ಹೆಲ್ತ್ ಈಗ ಸನ್ನದ್ಧವಾಗಿದೆ.