ತುಮಕೂರು: ಗುಬ್ಬಿ ರೈಲು ನಿಲ್ದಾಣದಲ್ಲಿ ಲಘು ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಇಂದು ತುಮಕೂರು ಜಿಲ್ಲೆಯ ಗುಬ್ಬಿ ರೈಲು ನಿಲ್ದಾಣದಲ್ಲಿ ಲೈಟ್ ರೋಡ್ ಓವರ್ ಬ್ರಿಡ್ಜ್ (ಆರ್‌ಒಬಿ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯನ್ನು ₹20 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿ.ಸೋಮಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಒಂದೇ ನಾಣ್ಯದ ಎರಡು ಮುಖಗಳಂತೆ” ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಪ್ರಸಕ್ತ ವರ್ಷದಲ್ಲಿ ಭಾರತ ಸರ್ಕಾರವು ಭಾರತೀಯ ರೈಲ್ವೆಗೆ ₹2.65 ಲಕ್ಷ ಕೋಟಿ ಮೀಸಲಿಟ್ಟಿದೆ, ಅದರಲ್ಲಿ ₹49,000 ಕೋಟಿಯನ್ನು ಕರ್ನಾಟಕ ರಾಜ್ಯದ ಯೋಜನೆಗಳಿಗೆ ನೀಡಲಾಗಿದೆ ಎಂದರು.
ಗುಬ್ಬಿ ರೈಲು ನಿಲ್ದಾಣವನ್ನು ಅಮೃತ ಭಾರತ ನಿಲ್ದಾಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪ್ರಯಾಣಿಕರ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಈ ಹಿಂದೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ವೆಚ್ಚ ಹಂಚಿಕೆ ವ್ಯವಸ್ಥೆಯಡಿಯಲ್ಲಿ ರಸ್ತೆ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗುತ್ತಿತ್ತು, ಇದು ವಿಳಂಬಕ್ಕೆ ಕಾರಣವಾಗುತ್ತಿತ್ತು. ಈಗ, ಕೇಂದ್ರ ಸರ್ಕಾರವು ಅಂತಹ ಯೋಜನೆಗಳಿಗೆ ಸಂಪೂರ್ಣವಾಗಿ ಹಣವನ್ನು ಒದಗಿಸುತ್ತಿರುವುದರಿಂದ, ಕೆಲಸಗಳು ಹೆಚ್ಚು ವೇಗವಾಗಿ ನಡೆಯುತ್ತಿವೆ. ಹೊಸ ಮಾರ್ಗಗಳ ನಿರ್ಮಾಣ, ಡಬ್ಲಿಂಗ್ ಕಾಮಗಾರಿಗಳು, ಮಾರ್ಗಗಳನ್ನು ಚತುಷ್ಪಥಗೊಳಿಸುವುದು ಮತ್ತು ನಿಲ್ದಾಣ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಗುಬ್ಬಿಯ ಸನ್ಮಾನ್ಯ ಶಾಸಕರು ಮತ್ತು ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಶ್ರೀ ಎಸ್.ಆರ್. ಶ್ರೀನಿವಾಸ್ ಅವರು, ಈ ಮೇಲ್ಸೇತುವೆ ನಿರ್ಮಾಣವು ಗುಬ್ಬಿ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತದೆ ಎಂದು ಹೇಳಿದರು. ತುಮಕೂರು ಜಿಲ್ಲೆಯಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿದ್ದಕ್ಕಾಗಿ ಅವರು ಶ್ರೀ ವಿ. ಸೋಮಣ್ಣ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಜಿ.ಎಸ್. ಬಸವರಾಜು, ಮಾಜಿ ಸಂಸದರು, ಅಜಯ್ ಶರ್ಮಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ); ಅಶುತೋಷ್ ಕುಮಾರ್ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಬೆಂಗಳೂರು, ; ಪರೀಕ್ಷಿತ್ ಮೋಹನ್‌ಪುರಿಯಾ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು; ಪ್ರದೀಪ್ ಪುರಿ, ಮುಖ್ಯ ಎಂಜಿನಿಯರ್; ರಾಷ್ಟ್ರೀಯ ಹೆದ್ದಾರಿ ಅಭಿವೃಧ್ದಿ ಪ್ರಾಧಿಕಾರದ ಅಧಿಕಾರಿಗಳು; ಮತ್ತು ಇತರ ಗಣ್ಯರು ಭಾಗವಹಿಸಿದ್ದರು.




