ಅಮೆರಿಕಕ್ಕೆ ಕೌಂಟರ್ ಕೊಡಲು ಭಾರತದ ಮಾಸ್ಟರ್ ಪ್ಲಾನ್; ಇನ್ಮುಂದೆ ಇಂತಹ ವಿದೇಶಿ ಸರಕುಗಳು ಸಿಗಲ್ಲ!

ನವದೆಹಲಿ: ಅಮೆರಿಕ ವಿಧಿಸಲು ಯೋಜಿಸಿರುವ ಹೆಚ್ಚುವರಿ ಸುಂಕದ (Tariff) ಭೀತಿಯಿಂದ ಪಾರಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬಲವಂತದ ದುಡಿತ ಅಥವಾ ಕಡ್ಡಾಯ ಕಾರ್ಮಿಕ ಪದ್ಧತಿಯನ್ನು (Forced Labour) ಬಳಸಿ ತಯಾರಿಸಲಾದ ವಿದೇಶಿ ಸರಕುಗಳ ಆಮದನ್ನು ಭಾರತ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಬಲವಂತದ ಕಾರ್ಮಿಕ ಪದ್ಧತಿಯ ಮೂಲಕ ಉತ್ಪಾದನೆಯಾಗುವ ಸರಕುಗಳ ಆಮದನ್ನು ತಡೆಗಟ್ಟಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇಕಡಾ 12.5 ರಷ್ಟು ಹೆಚ್ಚುವರಿ ವ್ಯಾಪಾರ ಸುಂಕವನ್ನು ವಿಧಿಸಲು ಅಮೆರಿಕ ಪ್ರಸ್ತಾಪಿಸಿತ್ತು. ಈ ಆರೋಪಗಳು ಹಾಗೂ ಸುಂಕದ ತೂಗುಗತ್ತಿಯಿಂದ ಪಾರಾಗಲು ಭಾರತ ಈಗ ಈ ಹೆಜ್ಜೆ ಇಟ್ಟಿದೆ.

ಕೇಂದ್ರ ಸರ್ಕಾರಕ್ಕೆ ಸಿಕ್ಕಿತು ವಿಶೇಷ ಅಧಿಕಾರ: ಕೇಂದ್ರ ವಾಣಿಜ್ಯ ಸಚಿವಾಲಯವು ಸೋಮವಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, “ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ಬಲವಂತದ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದಿಸಿದ ಅಥವಾ ತಯಾರಿಸಿದ ಯಾವುದೇ ಸರಕುಗಳ ಆಮದನ್ನು ಅಧಿಸೂಚನೆಯ ಮೂಲಕ ನಿಷೇಧಿಸುವ ಸಂಪೂರ್ಣ ಅಧಿಕಾರವನ್ನು ಈಗ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.”

ವಿದೇಶಿ ವ್ಯಾಪಾರ ಸಂಸ್ಥೆಯಿಂದ ತನಿಖೆ: ಭಾರತಕ್ಕೆ ಆಮದಾಗುವ ವಿದೇಶಿ ಸರಕುಗಳನ್ನು ತಯಾರಿಸಲು ಬಲವಂತದ ಕಾರ್ಮಿಕರನ್ನು ಬಳಸಲಾಗಿದೆಯೇ ಎಂಬುದನ್ನು ಭಾರತದ ವಿದೇಶಿ ವ್ಯಾಪಾರ ಸಂಸ್ಥೆಯು (Foreign Trade Body) ಕೂಲಂಕಷವಾಗಿ ತನಿಖೆ ನಡೆಸಲಿದೆ. ತನಿಖೆಯ ವೇಳೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾದಲ್ಲಿ, ಸಂಸ್ಥೆಯು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ, ಆ ನಿರ್ದಿಷ್ಟ ಉತ್ಪನ್ನಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.

ಈ ಹೊಸ ನಿಯಮಾವಳಿಗಳ ಅಧಿಕೃತ ಆದೇಶವು ಪ್ರಕಟಗೊಂಡ 30 ದಿನಗಳ ನಂತರ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅಮೆರಿಕದ ಸುಂಕದ ಭೀತಿ: ಪ್ರಸ್ತುತ ಬಹುತೇಕ ದೇಶಗಳಂತೆ ಭಾರತದಿಂದ ರಫ್ತಾಗುವ ಬಹುಪಾಲು ಸರಕುಗಳ ಮೇಲೆ ಅಮೆರಿಕ ಶೇಕಡಾ 10 ರಷ್ಟು ಸುಂಕವನ್ನು ವಿಧಿಸುತ್ತಿದೆ. ಆದರೆ, ಬಲವಂತದ ಕಾರ್ಮಿಕ ಪದ್ಧತಿ ಮತ್ತು ಮಿತಿಮೀರಿದ ಕೈಗಾರಿಕಾ ಸಾಮರ್ಥ್ಯದ (Excess Industrial Capacity) ಕುರಿತಾಗಿ ವಾಷಿಂಗ್ಟನ್ ನಡೆಸುತ್ತಿರುವ ಎರಡು ಪ್ರತ್ಯೇಕ ತನಿಖೆಗಳ ಕಾರಣದಿಂದಾಗಿ, ಮುಂಬರುವ ದಿನಗಳಲ್ಲಿ ಭಾರತದ ಸರಕುಗಳ ಮೇಲೆ ಅಮೆರಿಕ ಇನ್ನೂ ಕಠಿಣ ಹಾಗೂ ಹೆಚ್ಚಿನ ಸುಂಕವನ್ನು ವಿಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಈ ನಿಷೇಧದ ತೀರ್ಮಾನ ಕೈಗೊಂಡಿದೆ.