‘ಮಹಾಭಾರತ’ದ ಭೀಮ ಬಂಧನ! ನಟ ಸೌರವ್ ಗುರ್ಜರ್ ವಿರುದ್ಧ ವಂಚನೆ ಆರೋಪ

ಹೈದರಾಬಾದ್: ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಹಾಗೂ ವೃತ್ತಿಪರ ಕುಸ್ತಿಪಟು ಸೌರವ್ ಗುರ್ಜರ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ವಂಚನೆ ದೂರಿನ ಆಧಾರದ ಮೇಲೆ ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, 2021ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಸೌರವ್ ಗುರ್ಜರ್ ಅವರ ಪರಿಚಯವಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಬಳಿಕ ವಾಟ್ಸಾಪ್ ಮೂಲಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಅದೇ ವರ್ಷದ ಡಿಸೆಂಬರ್ 25ರಂದು ಮೊದಲ ಬಾರಿಗೆ ನೇರವಾಗಿ ಭೇಟಿಯಾಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೌರವ್ ಗುರ್ಜರ್ ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಮದುವೆಯಾದ ಬಳಿಕ ಪತ್ನಿಗೆ ಸಿಗುವ ಗೌರವ ಮತ್ತು ಹಕ್ಕುಗಳನ್ನು ನೀಡುವುದಾಗಿ ಹೇಳಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಭರವಸೆಯನ್ನು ನಂಬಿ ಅಮೆರಿಕದಲ್ಲಿದ್ದ ಉದ್ಯೋಗವನ್ನು ತೊರೆದು ಭಾರತಕ್ಕೆ ಮರಳಿದ್ದಾಗಿ ತಿಳಿಸಿದ್ದಾರೆ.

ಇದಲ್ಲದೆ, ಭಾರತದಲ್ಲಿ ಇಬ್ಬರೂ ಸೇರಿ ಹೊಸ ಉದ್ಯಮ ಆರಂಭಿಸುವುದಾಗಿ ಸೌರವ್ ಹೇಳಿದ್ದರು. ತಮ್ಮ ಉದ್ಯೋಗವನ್ನು ತೊರೆಯುವಂತೆ ಕೂಡ ಪ್ರೇರೇಪಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಆದರೆ ಬಳಿಕ ಮದುವೆಯ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ. ಮದುವೆಯಾಗುವಂತೆ ಒತ್ತಾಯಿಸಿದಾಗಲೆಲ್ಲ ಸೌರವ್ ತಮ್ಮನ್ನು ಬ್ಲಾಕ್ ಮಾಡುತ್ತಿದ್ದರು. ಅಲ್ಲದೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಭೀಮನ ಪಾತ್ರದಿಂದ ಖ್ಯಾತಿ

ಸೌರವ್ ಗುರ್ಜರ್ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಗಂಭೀರ ನೋಟ ಹಾಗೂ ಬಲಿಷ್ಠ ದೇಹದಿಂದ ಪಾತ್ರಕ್ಕೆ ವಿಶೇಷ ಮೆರುಗು ನೀಡಿದ್ದರು. ರಣಬೀರ್ ಕಪೂರ್ ಅಭಿನಯದ ‘ಬ್ರಹ್ಮಾಸ್ತ್ರ: ಪಾರ್ಟ್ ಒನ್–ಶಿವ’ ಚಿತ್ರದಲ್ಲೂ ‘ಜೋರ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಹಿಳೆ ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕರಣದ ಸತ್ಯಾಸತ್ಯತೆ ತನಿಖೆಯ ಬಳಿಕ ತಿಳಿದುಬರಬೇಕಿದೆ.