ಆಂಧ್ರ ಡಿಸಿಎಂ ಪವನ್ ಕಲ್ಯಾಣ್-ಅನ್ನಾ ದಾಂಪತ್ಯ ಅಂತ್ಯ | Andhra DCM Pawan Kalyan

Andhra DCM Pawan Kalyan and Annas marriage ends

ಅಮರಾವತಿ: ಟಾಲಿವುಡ್ ಖ್ಯಾತ ನಟ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್(Andhra DCM Pawan Kalyan) ತಮ್ಮ ಪತ್ನಿ ಅನ್ನಾ ಕೊನಿಡೇಲಾ ಅವರಿಂದ ಬೇರ್ಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಇಬ್ಬರ 13 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಂತಾಗಿದೆ. ಪರಸ್ಪರ ಗೌರವ ಹಾಗೂ ಒಡಂಬಡಿಕೆಯೊಂದಿಗೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ದಂಪತಿ ತಿಳಿಸಿದ್ದಾರೆ.

ಸೋಮವಾರ ತಡರಾತ್ರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ (PR) ಮೂಲಕ ಈ ಸಂಬಂಧ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಜಂಟಿ ಹೇಳಿಕೆಯಲ್ಲಿ ಏನಿದೆ?

“ನಮ್ಮ ಜೀವನದ ಮಹತ್ವದ ಅವಧಿಯನ್ನು ಒಟ್ಟಿಗೆ ಕಳೆದ ನಂತರ, ಪರಸ್ಪರ ತಿಳುವಳಿಕೆ ಮತ್ತು ಗೌರವದೊಂದಿಗೆ ನಾವು ಪ್ರತ್ಯೇಕವಾಗಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ, ನಾವಿಬ್ಬರೂ ಉತ್ತಮ ಸ್ನೇಹಿತರಾಗಿ ಮತ್ತು ಪ್ರೀತಿಯ ಪೋಷಕರಾಗಿ ನಮ್ಮ ಮಕ್ಕಳ ಜೊತೆಗಿರುತ್ತೇವೆ. ಮಕ್ಕಳ ಸಂತೋಷ ಮತ್ತು ಅವರ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿರಲಿದೆ,” ಎಂದು ದಂಪತಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜೊತೆಗೆ, “ಈ ವೈಯಕ್ತಿಕ ಪರಿವರ್ತನೆಯ ಹಂತದಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮಗಳು ನಮ್ಮ ಖಾಸಗಿತನವನ್ನು ಗೌರವಿಸಬೇಕು. ಇಷ್ಟು ವರ್ಷಗಳ ಕಾಲ ನಮ್ಮ ಜೊತೆ ನಿಂತು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು,” ಎಂದು ಕೋರಿದ್ದಾರೆ.

ಖಾಸಗಿತನಕ್ಕೆ ಮನವಿ, ವಿಚ್ಛೇದನದ ವಿವರಗಳಿಲ್ಲ:

ಈ ಮಹತ್ವದ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದನ್ನು ಪವನ್ ಕಲ್ಯಾಣ್ ಅಥವಾ ಅನ್ನಾ ಅವರಾಗಲಿ ಬಹಿರಂಗಪಡಿಸಿಲ್ಲ. ಅಲ್ಲದೆ, ಜಂಟಿ ಹೇಳಿಕೆಯಲ್ಲಿ ಕಾನೂನಾತ್ಮಕ ವಿಚ್ಛೇದನ ಪ್ರಕ್ರಿಯೆಗಳು ಅಥವಾ ಮಕ್ಕಳ ಪಾಲನೆ ಕುರಿತ ಒಪ್ಪಂದಗಳ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖ ಮಾಡಲಾಗಿಲ್ಲ.

ಪವನ್ ಕಲ್ಯಾಣ್ ಅವರ ಮೂರನೇ ವಿವಾಹ:

ರಷ್ಯಾದ ಪ್ರಜೆಯಾಗಿರುವ ಅನ್ನಾ ಅವರನ್ನು ಪವನ್ ಕಲ್ಯಾಣ್ 2013 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಪೊಲೆನಾ ಅಂಜನಾ ಪವನೋವಾ ಎಂಬ ಮಗಳು ಹಾಗೂ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗನಿದ್ದಾನೆ.

ಇದು ಪವನ್ ಕಲ್ಯಾಣ್(Actor-politician Pawan Kalyan) ಅವರ ಮೂರನೇ ದಾಂಪತ್ಯವಾಗಿದ್ದು, ಇದೀಗ ಅಂತ್ಯಗೊಂಡಿದೆ. ಇದಕ್ಕೂ ಮೊದಲು ಅವರು 1997 ರಲ್ಲಿ ನಂದಿನಿ ಎಂಬುವವರನ್ನು ವಿವಾಹವಾಗಿ 1999 ರಲ್ಲಿ ಬೇರ್ಪಟ್ಟಿದ್ದರು. ನಂತರ 2009 ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಅಕಿರಾ ನಂದನ್ ಹಾಗೂ ಆದ್ಯ ಎಂಬ ಇಬ್ಬರು ಮಕ್ಕಳಿದ್ದು, 2012 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು.