35 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಆದೇಶ | Tahsildar Transfer

State government order transferring 35 Tahsildars

ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ತರಲಾಗಿದ್ದು, ತಹಶೀಲ್ದಾರ್(Tahsildar) ಶ್ರೇಣಿಯ 35 ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಏಕಾಏಕಿ ವರ್ಗಾವಣೆಗೊಳಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ನರಸಿಂಹಮೂರ್ತಿ ಜಿ.ಕೆ. ಅವರ ಆದೇಶದ ಮೇರೆಗೆ ಈ ಪ್ರಕ್ರಿಯೆ ನಡೆದಿದ್ದು, ಸ್ಥಳನಿಯುಕ್ತಿಗೊಂಡಿರುವ ಎಲ್ಲಾ ಅಧಿಕಾರಿಗಳು ತಕ್ಷಣದಿಂದಲೇ ನೂತನ ಹುದ್ದೆಗಳಲ್ಲಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆ ಮೂಲಕ ತಹಶೀಲ್ದಾರ್ ಗಳನ್ನು ವರ್ಗಾವಣೆ(Tahsildar Transfer) ಮಾಡಿ ಸರ್ಕಾರ ಆದೇಶಿಸಿದೆ.

ವರ್ಗಾವಣೆಯಾದ ಅಧಿಕಾರಿಗಳು ಹೊಸ ಕಚೇರಿಯಲ್ಲಿ ಕಾರ್ಯಭಾರ ವಹಿಸಿಕೊಂಡ ಬಳಿಕ ತಮ್ಮ ಕರ್ತವ್ಯ ವರದಿಯನ್ನು (ಸಿಟಿಸಿ) ಇಲಾಖೆಯ ಇಮೇಲ್‌ಗೆ ಕಡ್ಡಾಯವಾಗಿ ರವಾನಿಸಬೇಕು. ಇನ್ನು ಇದೇ ವರ್ಗಾವಣೆ ಹಿನ್ನೆಲೆಯಲ್ಲಿ ಹುದ್ದೆ ಕಳೆದುಕೊಂಡು ಸ್ಥಳ ನಿರೀಕ್ಷೆಯಲ್ಲಿ ಉಳಿಯಲಿರುವ ಅಧಿಕಾರಿಗಳು ಕಂದಾಯ ಇಲಾಖೆಯ ಸೇವೆಗಳು-3 ಶಾಖೆಗೆ ಹಾಜರಾಗಿ ಮುಂದಿನ ಆದೇಶಕ್ಕಾಗಿ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ.

ಪ್ರಮುಖ ಸ್ಥಳ ಬದಲಾವಣೆಗಳ ಪೂರ್ಣ ವಿವರ:

ತುಮಕೂರಿನ ಎತ್ತಿನಹೊಳೆ ಯೋಜನೆಯಲ್ಲಿ ಕರ್ತವ್ಯದಲ್ಲಿದ್ದ ವಿಶೇಷ ತಹಶೀಲ್ದಾರ್ ನಟರಾಜ್ ಟಿ.ಆರ್ ಅವರನ್ನು ದೊಡ್ಡಬಳ್ಳಾಪುರದ ಅದೇ ಯೋಜನೆಗೆ ಬದಲಾಯಿಸಲಾಗಿದೆ. ಕರಾವಳಿಯ ಬೈಂದೂರು ತಾಲೂಕು ಕಚೇರಿಯಲ್ಲಿದ್ದ ರಾಮಚಂದ್ರಪ್ಪ ಅವರನ್ನು ಉತ್ತರ ಕನ್ನಡದ ಭಟ್ಕಳ ತಾಲೂಕು ಕಚೇರಿಯ ಖಾಲಿ ಹುದ್ದೆಗೆ ಕಳುಹಿಸಲಾಗಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದ ಉಮಾಕಾಂತ ಹಳ್ಳಿ ಅವರನ್ನು ಕಲಬುರಗಿ ತಾಲೂಕು ತಹಶೀಲ್ದಾರ್ ಆಗಿ ನೇಮಿಸಲಾಗಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿರುವ ಸವಿತಾ ಹಂಪಿಹೊಳಿ ಅವರ ಹಿಂದಿನ ವರ್ಗಾವಣೆಯನ್ನು ರದ್ದುಪಡಿಸಿ ಅದೇ ಸ್ಥಳದಲ್ಲಿ ಮುಂದುವರಿಸಲಾಗಿದೆ.

ಗೌರಿಬಿದನೂರಿನ ತಹಶೀಲ್ದಾರ್ ಬಿ. ಶಶಿಕುಮಾರ್ ಅವರನ್ನು ಗುಡಿಬಂಡೆಗೆ, ಅಫಜಲಪೂರದಲ್ಲಿದ್ದ ಶರಣಬಸವ ಹೊಸಮನಿ ಅವರನ್ನು ಹುಮನಾಬಾದ್‌ಗೆ, ಬೈಂದೂರಿನ ಮತ್ತೊಬ್ಬ ಅಧಿಕಾರಿ ರವಿರಾಜ ದೀಕ್ಷಿತ್ ಅವರನ್ನು ಉತ್ತರ ಕನ್ನಡದ ಅಂಕೋಲಾಕ್ಕೆ ಹಾಗೂ ಶಿಗ್ಗಾಂವಿಯಲ್ಲಿದ್ದ ಡಿ.ಟಿ. ವಾಲ್ಮೀಕಿ ಅವರನ್ನು ಗದಗ ತಾಲೂಕಿಗೆ ನಿಯೋಜಿಸಲಾಗಿದೆ. ಕಲಬುರಗಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿದ್ದ ಸುರೇಶ ತೊನಸಳ್ಳಿಕರ್ ಅವರನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಿಶೇಷ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.

ಸಿಂಧನೂರು ತಹಶೀಲ್ದಾರ್ ಅರುಣ್ ಹೆಚ್. ದೇಸಾಯಿ ಅವರಿಗೆ ಹೊಸಪೇಟೆ ಹೊಣೆ ನೀಡಲಾಗಿದ್ದು, ಸ್ಥಳ ನಿರೀಕ್ಷೆಯಲ್ಲಿದ್ದ ಅರುಂಧತಿ ಅವರಿಗೆ ಮುಳಬಾಗಿಲು ಹಾಗೂ ಪುತ್ತೂರಿನ ಎಸ್.ಬಿ. ಕೂಡಲಗಿ ಅವರಿಗೆ ಕಡಬ ತಾಲೂಕು ವಹಿಸಲಾಗಿದೆ. ಸಾಲಿಗ್ರಾಮದ ರುಕಿಯಾಬೇಗಂ ಹೆಚ್.ಡಿ. ಕೋಟೆಗೂ, ಶೋಭಾ ಎನ್. ಚಿಂತಾಮಣಿಗೂ, ವಿಜಯಪುರದ ಪ್ರಶಾಂತ ಎಸ್. ಚನಗೊಂಡ ತಿಕೋಟಾಕ್ಕೂ, ಕುಂದಗೋಳದ ರಾಜು ಮಾವರಕರ ಶಿಗ್ಗಾಂವಿಗೂ ಹಾಗೂ ಬಾದಾಮಿಯಲ್ಲಿದ್ದ ಎಸ್.ಎಫ್. ಬೊಮ್ಮಣ್ಣವರ ಅವರನ್ನು ಬಾಗಲಕೋಟೆ ತಾಲೂಕಿಗೂ ವರ್ಗಾಯಿಸಲಾಗಿದೆ.

ಬೆಳಗಾವಿ ಹುಕ್ಕೇರಿಯ ಪ್ರಕಾಶ ಎಂ. ಕಲ್ಲೊಳ್ಳಿ ಜೋಯಿಡಾ ತಾಲೂಕಿಗೆ ನಿಯೋಜನೆಗೊಂಡರೆ, ಸೇಡಂನಲ್ಲಿದ್ದ ನಾಗನಾಥ ತರಗೆ ಚಿತ್ತಾಪೂರಕ್ಕೆ, ಹೊಳೆನರಸೀಪುರದ ರೇಣುಕುಮಾರ್ ವೈ.ಎಂ. ಅರಕಲಗೂಡಿಗೆ, ಅಥಣಿಯ ಆರ್.ಎಸ್. ವಳಸಂಗ ತಿಕೋಟಾಕ್ಕೆ, ಯಾದಗಿರಿಯ ಸುರೇಶ ರಾಣಪ್ಪ ದೇವದುರ್ಗಕ್ಕೆ ಹಾಗೂ ಬಬಲೇಶ್ವರದ ಆನಂದ ಆರ್. ಕೋಲಾರ ದೇವರಹಿಪ್ಪರಗಿಗೆ ವರ್ಗವಾಗಿದ್ದಾರೆ. ಬಸವಕಲ್ಯಾಣದ ಘಮಾವತಿ ರಾಮಚಂದ್ರ ರಾಠೋಡ್ ಹುಲಸೂರು ತಾಲೂಕಿಗೆ, ಪಾಂಡವಪುರದ ಪ್ರಕಾಶ್ ಟಿ.ಎಂ. ಸುಳ್ಯಕ್ಕೆ, ಕಲಬುರಗಿಯ ವೆಂಕನಗೌಡ ಆಳಂದ ತಾಲೂಕಿಗೆ, ಹೊಸದುರ್ಗದ ತಿರುಪತಿ ಸಂಡೂರಿಗೆ ಮತ್ತು ಭಾಲ್ಕಿಯ ಪಲ್ಲವಿ ಬೆಳಕಿರೆ ಅವರನ್ನು ಬೀದರ್ ಜಿಲ್ಲಾ ತರಬೇತಿ ಸಂಸ್ಥೆಗೆ ವರ್ಗಾಯಿಸಲಾಗಿದೆ. ರಾಯಚೂರಿನ ಬಿ. ರಾಜಶೇಖರ ರಾಯಚೂರು ತಾಲೂಕು ಕಚೇರಿಗೆ, ಬೆಂಗಳೂರು ಉತ್ತರ ಉಪವಿಭಾಗದ ಅಧಿಕಾರಿಯೊಬ್ಬರನ್ನು ಬೆಂಗಳೂರು ದಕ್ಷಿಣಕ್ಕೆ, ತಿಪಟೂರಿನ ಜಗನ್ನಾಥ್ ಎಸ್.ಕೆ. ಅವರನ್ನು ಚಿಕ್ಕನಾಯನಹಳ್ಳಿಗೆ ಹಾಗೂ ಗದಗ ಡಿಸಿ ಕಚೇರಿಯಲ್ಲಿದ್ದ ಸಂತೋಷ ಹಿರೇಮಠ ಅವರನ್ನು ಹುಬ್ಬಳ್ಳಿ ಗ್ರಾಮೀಣ ಭಾಗಕ್ಕೆ ನಿಯುಕ್ತಿಗೊಳಿಸಲಾಗಿದೆ.

ಮಲೆನಾಡು-ಶಿವಮೊಗ್ಗ ಭಾಗದ ಬದಲಾವಣೆಗಳು:

ಮಲೆನಾಡು ಭಾಗದಲ್ಲೂ ಪ್ರಮುಖ ಅದಲು-ಬದಲು ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನೂಪ್ ಸಂಜೋಗ್ ಎಂ.ಆರ್. ಅವರನ್ನು ಶಿವಮೊಗ್ಗ ತಾಲೂಕು ತಹಶೀಲ್ದಾರ್ ಗ್ರೇಡ್-1 ಆಗಿ ನೇಮಿಸಲಾಗಿದೆ. ಇವರನ್ನು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿ.ಎಸ್. ರಾಜೀವ್ ಅವರ ಜಾಗಕ್ಕೆ ತರಲಾಗಿದೆ. ಹಾಗೆಯೇ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ತಹಶೀಲ್ದಾರ್ ಗ್ರೇಡ್-2 ಆಗಿದ್ದ ಪ್ರದೀಪ್ ಆರ್. ಅವರನ್ನು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ತೆರವಾಗಿದ್ದ ಹುದ್ದೆಗೆ ವರ್ಗಾಯಿಸಲಾಗಿದೆ. ಮತ್ತೊಂದೆಡೆ ಮೈಸೂರು ಜಿಲ್ಲೆ ಸರಗೂರಿನಲ್ಲಿದ್ದ ಮೋಹನ ಕುಮಾರಿ ಅವರನ್ನು ಬೆಂಗಳೂರು ದಕ್ಷಿಣ ತಾಲೂಕಿನ ಹಾರೋಹಳ್ಳಿಗೆ ಸ್ಥಳಾಂತರಿಸಿ ಸರ್ಕಾರ ಆದೇಶ ನೀಡಿದೆ