ಜಿಯೋ, ಏರ್‌ಟೆಲ್, Vi ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ದೇಶದ ಮೊಬೈಲ್ ಬಳಕೆದಾರರ ಹಿತದೃಷ್ಟಿಯಿಂದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ಹೆಜ್ಜೆಯಿಟ್ಟಿದೆ. ಇಂಟರ್ನೆಟ್ ಡೇಟಾ ಅಗತ್ಯವಿಲ್ಲದ ಗ್ರಾಹಕರಿಗಾಗಿ ಕೇವಲ ಕರೆ ಮತ್ತು ಎಸ್‌ಎಂಎಸ್ ಸೌಲಭ್ಯವಿರುವ ಅಗ್ಗದ ರೀಚಾರ್ಜ್ ಆಯ್ಕೆಗಳನ್ನು ಕಡ್ಡಾಯವಾಗಿ ನೀಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬಳಕೆದಾರರು ಇನ್ಮುಂದೆ ತಮಗೆ ಬೇಕಾದ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಈ ತಿದ್ದುಪಡಿ ನೆರವಾಗಲಿದೆ.

ಡೇಟಾ ರಹಿತ ಅಗ್ಗದ ಪ್ಲಾನ್‌ಗಳು ಕಡ್ಡಾಯ

ಹೊಸ ನಿಯಮಾವಳಿಗಳ ಪ್ರಕಾರ, ಪ್ರಸ್ತುತ ಚಾಲ್ತಿಯಲ್ಲಿರುವ 30 ದಿನ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಕಾಲಿಂಗ್, ಎಸ್‌ಎಂಎಸ್ ಮತ್ತು ಡೇಟಾ ಒಳಗೊಂಡಿರುವ ಎಲ್ಲಾ ಪ್ಲಾನ್‌ಗಳಂತೆಯೇ, ಕೇವಲ ಧ್ವನಿ ಕರೆ ಮತ್ತು ಎಸ್‌ಎಂಎಸ್ ಮಾತ್ರ ಒಳಗೊಂಡಿರುವ ಪ್ರತ್ಯೇಕ ಪ್ಲಾನ್‌ಗಳನ್ನು ಕಂಪನಿಗಳು ಒದಗಿಸಬೇಕು. ಇಂತಹ ಯೋಜನೆಗಳಲ್ಲಿ ಮೊಬೈಲ್ ಡೇಟಾ ಇರುವುದಿಲ್ಲವಾದ್ದರಿಂದ, ಇವುಗಳ ದರವನ್ನು ಸಾಮಾನ್ಯ ಬಂಡಲ್ ಪ್ಲಾನ್‌ಗಳಿಗಿಂತ ಸೂಕ್ತ ಪ್ರಮಾಣದಲ್ಲಿ ಕಡಿಮೆ ನಿಗದಿಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ದೀರ್ಘಾವಧಿಯ ಸಾಮಾನ್ಯ ಪ್ಲಾನ್‌ಗಳಿಗೆ ಪೂರಕವಾಗಿ ಕನಿಷ್ಠ ಒಂದು ದೀರ್ಘಾವಧಿಯ ಕರೆ ಮತ್ತು ಎಸ್‌ಎಂಎಸ್ ವೋಚರ್ ಅನ್ನು ಸಹ ಕಂಪನಿಗಳು ಬಿಡುಗಡೆ ಮಾಡಬೇಕಿದೆ.

ಪ್ರತಿ ತಿಂಗಳ ನಿರ್ದಿಷ್ಟ ದಿನಾಂಕದಂದು ನವೀಕರಣ

ಟೆಲಿಕಾಂ ಕಂಪನಿಗಳು ಇನ್ಮುಂದೆ ಪ್ರತಿ ತಿಂಗಳೂ ಒಂದೇ ದಿನಾಂಕದಂದು ನವೀಕರಣಗೊಳ್ಳುವ ಕನಿಷ್ಠ ಒಂದು ಕರೆ ಮತ್ತು ಎಸ್‌ಎಂಎಸ್ ಪ್ಲಾನ್ ಪರಿಚಯಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿರ್ದಿಷ್ಟ ತಿಂಗಳಲ್ಲಿ ಆ ದಿನಾಂಕ ಬಾರದಿದ್ದರೆ (ಉದಾಹರಣೆಗೆ ಫೆಬ್ರವರಿಯಲ್ಲಿ 30 ಅಥವಾ 31 ನೇ ತಾರೀಕು), ಆ ತಿಂಗಳ ಕೊನೆಯ ದಿನದಂದು ಪ್ಲಾನ್ ನವೀಕರಣಗೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು. ಇದರಿಂದಾಗಿ ಬಳಕೆದಾರರು ಪ್ರತಿ ಬಾರಿಯೂ ತಮ್ಮ ರೀಚಾರ್ಜ್ ದಿನಾಂಕವನ್ನು ಲೆಕ್ಕ ಹಾಕುವ ಗೊಂದಲ ತಪ್ಪಲಿದೆ.

ನಿಯಮ ಪರಿಷ್ಕರಣೆಗೆ ಕಾರಣವಾದ ಅಂಶಗಳು

ಟೆಲಿಕಾಂ ಆಪರೇಟರ್‌ಗಳು ನೀಡುತ್ತಿದ್ದ ಹೆಚ್ಚಿನ ಧ್ವನಿ ಕರೆ ಮತ್ತು ಎಸ್‌ಎಂಎಸ್ ವಿಶೇಷ ವೋಚರ್‌ಗಳು ದೀರ್ಘಾವಧಿಗೆ ಮಾತ್ರ ಸೀಮಿತವಾಗಿದ್ದವು ಎಂಬುದನ್ನು ಟ್ರಾಯ್ ಗಮನಿಸಿತ್ತು. ಇದರಿಂದಾಗಿ ಕಡಿಮೆ ಆದಾಯದ ಗ್ರಾಹಕರಿಗೆ ಕಡಿಮೆ ಅವಧಿಯ ಅಗ್ಗದ ಆಯ್ಕೆಗಳು ಸಿಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಾಧಿಕಾರವು 2026ರ ಏಪ್ರಿಲ್ 7 ರಂದು ‘ಟೆಲಿಕಾಂ ಗ್ರಾಹಕ ಸಂರಕ್ಷಣೆ (13ನೇ ತಿದ್ದುಪಡಿ) ನಿಯಮಾವಳಿಗಳು, 2026’ರ ಕರಡನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿತ್ತು. ಈ ಕುರಿತು ಸಾರ್ವಜನಿಕರು ಹಾಗೂ ಪಾಲುದಾರರಿಂದ 1,132 ಪ್ರತಿಕ್ರಿಯೆಗಳು ಬಂದಿದ್ದು, ಜೂನ್ 15, 2026 ರಂದು ನಡೆದ ಮುಕ್ತ ಚರ್ಚೆ ಮತ್ತು ಆಂತರಿಕ ವಿಶ್ಲೇಷಣೆಯ ನಂತರ ಈ ನಿಯಮವನ್ನು ಅಂತಿಮಗೊಳಿಸಲಾಗಿದೆ.

ಗ್ರಾಹಕರ ಜೇಬಿಗೆ ಉಳಿತಾಯದ ನಿರೀಕ್ಷೆ

ಇಂಟರ್ನೆಟ್‌ಗಾಗಿ ಹೆಚ್ಚಾಗಿ ವೈ-ಫೈ ಬಳಸುವವರು, ಹಿರಿಯ ನಾಗರಿಕರು ಮತ್ತು ಕೇವಲ ಸಾಮಾನ್ಯ ಕರೆಗಳಿಗೆ ಫೋನ್ ಬಳಸುವ ಗ್ರಾಹಕರಿಗೆ ಇದು ನೇರ ಲಾಭ ತರಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 28 ದಿನಗಳ ಅವಧಿಯಿಂದಾಗಿ ಗ್ರಾಹಕರು ವರ್ಷಕ್ಕೆ 12 ರ ಬದಲು 13 ಬಾರಿ ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಇತ್ತು. ಆದರೆ, ಪ್ರಸ್ತುತ ಇರುವ ಎಲ್ಲ 28 ದಿನಗಳ ಪ್ಲಾನ್‌ಗಳನ್ನು 30 ದಿನಗಳಿಗೆ ಬದಲಾಯಿಸುವುದು ಈ ನಿಯಮದ ಉದ್ದೇಶವಲ್ಲ. ಬದಲಾಗಿ, ಅಗತ್ಯವಿಲ್ಲದ ಡೇಟಾಗೆ ದುಬಾರಿ ಹಣ ತೆರಬೇಕಾದ ಹೊರೆಯನ್ನು ತಪ್ಪಿಸಿ, ಮಾಸಿಕ ಆಧಾರದಲ್ಲಿ ಕೈಗೆಟುಕುವ ದರದಲ್ಲಿ ಕರೆ ಹಾಗೂ ಎಸ್‌ಎಂಎಸ್ ಆಯ್ಕೆಗಳನ್ನು ಒದಗಿಸುವುದು ಟ್ರಾಯ್‌ನ ಮುಖ್ಯ ಉದ್ದೇಶವಾಗಿದೆ.