ಪಣಜಿ: 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ರಷ್ಯಾವನ್ನು ಪಾಲುದಾರ ರಾಷ್ಟ್ರವಾಗಿ ಗೌರವಿಸಲಿದ್ದು, ನಾಲ್ಕು ರಷ್ಯನ್ ಚಲನಚಿತ್ರಗಳ ವಿಶೇಷ ಪ್ರದರ್ಶನ ಆಯೋಜಿಸಲಿದೆ. ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿರುವ ಉತ್ಸವದಲ್ಲಿ ‘ಗಡಿಗಳಿಲ್ಲದ ಕಥೆಗಳು’ ಎಂಬ ವಿಷಯದಡಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಅನಸ್ತಾಸಿಯಾ ಕುಜಿನಾ ನಿರ್ದೇಶನದ ‘ಬೊ ಬೊ’ (98 ನಿಮಿಷ) ಭಾರತದ ಪ್ರಥಮ ಪ್ರದರ್ಶನ ಕಾಣಲಿದೆ. ರೌಲ್ ಗೈಡಾರೋವ್ ಅವರ ‘ಸಿಡ್ನಿ ಲುಮೆಟ್ ಅವರ ಜನ್ಮದಿನ’ (92 ನಿಮಿಷ) ಕೂಡ ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ. ಈ ಚಿತ್ರ ವೈಬೋರ್ಗ್ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿ ಪಡೆದಿದೆ.

ನಿಕಿತಾ ಗ್ರುಶಿನ್ ನಿರ್ದೇಶನದ ‘ನ್ಯೂ ಹೋಮ್’ (101 ನಿಮಿಷ) IFFIನಲ್ಲಿ ವಿಶ್ವ ಪ್ರಥಮ ಪ್ರದರ್ಶನ ಕಾಣಲಿದೆ. ಹರ್ಬರ್ಟ್ ರಪ್ಪಾಪೋರ್ಟ್ ಅವರ ‘ಚೆರ್ಯೊಮುಷ್ಕಿ’ (91 ನಿಮಿಷ) ಭಾರತದ ಪ್ರಥಮ ಪ್ರದರ್ಶನವಾಗಲಿದೆ.
ಈ ನಾಲ್ಕು ಚಿತ್ರಗಳ ಮೂಲಕ ಸಮಕಾಲೀನ ರಷ್ಯನ್ ಕಥನಗಳ ಜೊತೆಗೆ ಸೋವಿಯತ್ ಕಾಲದ ಸಂಗೀತ ಚಿತ್ರವನ್ನೂ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತಿದೆ. ಕುಟುಂಬ, ಸಾಮಾಜಿಕ ಪೂರ್ವಾಗ್ರಹ, ಪುನರ್ವಸತಿ ಮತ್ತು ಸಮುದಾಯದ ವಿಷಯಗಳನ್ನು ಚಿತ್ರಗಳು ಒಳಗೊಂಡಿವೆ.
ಚಿತ್ರ ಪ್ರದರ್ಶನ, ಪ್ರಥಮ ಪ್ರದರ್ಶನ, ಸ್ಪರ್ಧೆ ಹಾಗೂ ಸಿನಿಮಾ ಉದ್ಯಮದ ಚಟುವಟಿಕೆಗಳ ಮೂಲಕ ಭಾರತ ಮತ್ತು ವಿದೇಶಗಳ ಚಿತ್ರರಂಗದ ಗಣ್ಯರು ಹಾಗೂ ಸಿನಿಮಾ ಪ್ರೇಮಿಗಳನ್ನು IFFI 2026 ಒಗ್ಗೂಡಿಸಲಿದೆ.



