ಕರ್ನಾಟಕದ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್ | Panchayat Elections

Muhurta Fix for District Taluk Panchayat Elections in Karnataka

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ(Panchayat Elections) ಕೊನೆಗೂ ಕಾಲ ಕೂಡಿಬಂದಿದೆ. ಮುಂಬರುವ ಜನವರಿ ಮೊದಲ ವಾರದಲ್ಲೇ ಮತದಾನ ಪ್ರಕ್ರಿಯೆ ನಡೆಸಲು ಕರ್ನಾಟಕ ಸರ್ಕಾರ(Government of Karnataka) ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ(Cabinet Meeting) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ (Local body elections) ಹಸಿರು ನಿಶಾನೆ ಸಿಕ್ಕಿದೆ.

ಜನವರಿಯಲ್ಲಿ ಜಿಪಂ-ತಾಪಂ, ಬೆನ್ನಲ್ಲೇ ಗ್ರಾಪಂ ಕದನ

ಸಂಪುಟ ಸಭೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಮೊದಲ ಹಂತವಾಗಿ ಜನವರಿ ಆರಂಭದಲ್ಲೇ ಜಿಪಂ ಮತ್ತು ತಾಪಂ ಚುನಾವಣೆಗಳನ್ನು ಮುಗಿಸಲು ತೀರ್ಮಾನಿಸಲಾಗಿದೆ. ಈ ಹಂತ ಮುಗಿದ ತಕ್ಷಣವೇ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಸಾಲಾಗಿ ನಡೆಸಲು ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ.

ಅಧಿಕಾರಿಗಳ ಆಡಳಿತಕ್ಕೆ ತೆರೆ: ಗ್ರಾಮೀಣಾಭಿವೃದ್ಧಿಗೆ ಹೊಸ ವೇಗ

2021ರಲ್ಲೇ ಪಂಚಾಯತ್ ಜನಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಂಡಿತ್ತು. ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ಗೊಂದಲಗಳಿಂದ ಚುನಾವಣೆ ಪದೇಪದೇ ಮುಂದೂಡಿಕೆಯಾಗಿತ್ತು. ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಕೈಯಲ್ಲಿದ್ದ ಗ್ರಾಮೀಣ ಆಡಳಿತಕ್ಕೆ ಈಗ ಮತ್ತೆ ಶಕ್ತಿ ತುಂಬಲು ಸರ್ಕಾರ ಮುಂದಾಗಿದೆ.

ಚುನಾವಣಾ ಆಯೋಗದೊಂದಿಗೆ ಚರ್ಚೆ: ಶೀಘ್ರದಲ್ಲೇ ಅಧಿಸೂಚನೆ

ಮೀಸಲಾತಿ ಅಧಿಸೂಚನೆ ಮತ್ತು ಮತದಾರರ ಪಟ್ಟಿ ಕುರಿತು ರಾಜ್ಯ ಚುನಾವಣಾ ಆಯೋಗದ ಜೊತೆ ಚರ್ಚಿಸಲು ಸರ್ಕಾರ ಮುಂದಾಗಿದೆ. ಅಧಿಕೃತ ದಿನಾಂಕ ಪ್ರಕಟಣೆಗೆ ಸಿದ್ಧತೆಗಳು ಬಿರುಸಾಗಿದ್ದು, ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಚುನಾವಣಾ ರಂಗು ಕಾವೇರಲಾರಂಭಿಸಿದೆ.