ಕ್ವಾಡ್ ರಾಷ್ಟ್ರಗಳ ಉದ್ಯಮಗಳ ಸಹಕಾರಕ್ಕೆ ವ್ಯಾಪಾರ ವೇದಿಕೆ ಸ್ಥಾಪನೆ ಚಿಂತನೆ: ಮಾರ್ಕೊ ರೂಬಿಯೊ

ಅಟ್ಲಾಂಟಾ: ಕ್ವಾಡ್ ರಾಷ್ಟ್ರಗಳಾದ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಉದ್ಯಮಗಳ ನಡುವೆ ಸಹಕಾರ ಹೆಚ್ಚಿಸಲು ವಿಶೇಷ ವ್ಯಾಪಾರ ವೇದಿಕೆ ಸ್ಥಾಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ನಾಲ್ಕು ದೇಶಗಳ ಉದ್ಯಮಿಗಳು ಪರಸ್ಪರ ಭೇಟಿಯಾಗಿ ಜಂಟಿ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳನ್ನು ಗುರುತಿಸಲು ಈ ವೇದಿಕೆ ನೆರವಾಗಲಿದೆ. ಕ್ವಾಡ್ ಸಭೆಗಳು ಕೇವಲ ಚರ್ಚೆ ಮತ್ತು ಮಾತುಕತೆಗಳಿಗೆ ಸೀಮಿತವಾಗದೆ, ನಿರ್ದಿಷ್ಟ ಕಾರ್ಯಯೋಜನೆಗಳಾಗಿ ರೂಪುಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರೇತರ ಸಹಕಾರಕ್ಕೆ ಉತ್ತೇಜನ ನೀಡುವ ವೇದಿಕೆಯಾಗಿಯೂ ಇದನ್ನು ಬಳಸಿಕೊಳ್ಳುವ ಉದ್ದೇಶವಿದೆ ಎಂದರು.

ಮಾನವೀಯ ನೆರವು ಮತ್ತು ವಿಪತ್ತು ನಿರ್ವಹಣೆಯಲ್ಲಿ ಕ್ವಾಡ್ ರಾಷ್ಟ್ರಗಳ ಸಹಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು. ಚಂಡಮಾರುತ, ಭೂಕಂಪ ಮತ್ತು ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ನಾಲ್ಕು ದೇಶಗಳು ತಮ್ಮ ಸಂಪನ್ಮೂಲಗಳನ್ನು ಒಗ್ಗೂಡಿಸಿ ಪೀಡಿತ ರಾಷ್ಟ್ರಗಳಿಗೆ ತ್ವರಿತ ನೆರವು ಒದಗಿಸುವ ವ್ಯವಸ್ಥೆ ರೂಪಿಸುವ ಗುರಿ ಹೊಂದಿವೆ ಎಂದು ರೂಬಿಯೊ ತಿಳಿಸಿದರು.

ಸಮುದ್ರ ಮೇಲ್ಮೈಯಲ್ಲಿನ ಚಟುವಟಿಕೆಗಳ ಜತೆಗೆ ನೀರಿನೊಳಗಿನ ಚಟುವಟಿಕೆಗಳ ಮೇಲೂ ನಿಗಾ ಇರಿಸಲು ಕ್ವಾಡ್ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಿಸುವ ಅಗತ್ಯವಿದೆ. ಮುಕ್ತ ಸಮುದ್ರ ಸಂಚಾರಕ್ಕೆ ಎದುರಾಗುವ ಬೆದರಿಕೆಗಳ ಕುರಿತು ಜಂಟಿ ಅರಿವು ಮತ್ತು ಮಾಹಿತಿ ವಿನಿಮಯಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಕ್ವಾಡ್ ಸಭೆಗಳಲ್ಲಿ ನಡೆಯುವ ಚರ್ಚೆಗಳನ್ನು ಸ್ಪಷ್ಟ ಕಾರ್ಯಯೋಜನೆಗಳಾಗಿ ಪರಿವರ್ತಿಸುವುದೇ ಪ್ರಮುಖ ಸವಾಲಾಗಿದೆ. ಸಹಕಾರದಲ್ಲಿ ಈಗಾಗಲೇ ಉತ್ತಮ ವೇಗ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಕ್ವಾಡ್ ನಾಯಕರ ಸಭೆಯಲ್ಲಿ ಹೊಸ ಕಾರ್ಯರೂಪದ ಕ್ರಮಗಳನ್ನು ಘೋಷಿಸುವ ನಿರೀಕ್ಷೆಯಿದೆ ಎಂದು ಮಾರ್ಕೊ ರೂಬಿಯೊ ಹೇಳಿದ್ದಾರೆ.