ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ‘ಮಾಲಿನ್ಯ ಮುಕ್ತ ದೀಪಾವಳಿ’ ಅಭಿಯಾನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಲಾಗಿದೆ. ನಟಿಯ ಪಾಲ್ಗೊಳ್ಳುವಿಕೆಗೆ ಮುಂಬೈ ಬಿಜೆಪಿ ಅಧ್ಯಕ್ಷ ಅಮೀತ್ ಸತಮ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಬಿಎಂಸಿ ಈ ಅಭಿಯಾನ ಆರಂಭಿಸಿತ್ತು. ಪಟಾಕಿ ಸಿಡಿಸುವುದನ್ನು ತಪ್ಪಿಸಿ, ಶಬ್ದ ಮತ್ತು ವಾಯು ಮಾಲಿನ್ಯ ಕಡಿಮೆ ಮಾಡುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ನಾಗರಿಕರಿಗೆ ಮನವಿ ಮಾಡಲಾಗಿತ್ತು. ಬಾಂಬೆ ಹೈಕೋರ್ಟ್ ನಿರ್ದೇಶನಗಳ ಹಿನ್ನೆಲೆಯಲ್ಲಿ ಈ ಅಭಿಯಾನ ರೂಪಿಸಲಾಗಿತ್ತು.
ದಿಯಾ ಮಿರ್ಜಾ ಸೇರಿದಂತೆ ಹಲವು ಗಣ್ಯರು ವಿಡಿಯೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಆದರೆ, ದಿಯಾ ಅವರ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಅಮೀತ್ ಸತಮ್, ಬಿಎಂಸಿಯ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಪೋಸ್ಟ್ ಹಾಕಿದ್ದರು.

‘ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದನ್ನು ದಿಯಾ ಮಿರ್ಜಾ ಅವರಿಂದ ಕಲಿಯುವ ಅಗತ್ಯವಿಲ್ಲ. ನಮ್ಮ ಸಂಪ್ರದಾಯಗಳು ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿವೆ’ ಎಂದು ಅವರು ಬರೆದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಬಿಎಂಸಿ ಆಯುಕ್ತೆ ಅಶ್ವಿನಿ ಭಿಡೆ ನೇತೃತ್ವದ ಆಡಳಿತವು ನಟಿಯ ವಿಡಿಯೋವನ್ನು ತೆಗೆದುಹಾಕಿದೆ.
ಆದರೆ, ನಟಿಯರಾದ ಮಾಧುರಿ ದೀಕ್ಷಿತ್, ನಿಶಿಗಂಧ ವಾಡ್ ಹಾಗೂ ಕ್ರಿಕೆಟಿಗ ಅಜಿಂಕ್ಯ ರಹಾನೆ ಕಾಣಿಸಿಕೊಂಡಿರುವ ಅಭಿಯಾನದ ಇತರ ವಿಡಿಯೋಗಳು ಬಿಎಂಸಿಯ ಎಕ್ಸ್ ಮತ್ತು ಇನ್ಸ್ಟಾಗ್ರಾಂ ಖಾತೆಗಳಲ್ಲಿ ಇನ್ನೂ ಲಭ್ಯವಿವೆ.
ಇನ್ನು, ಮುಂಬೈ ಮೇಯರ್ ರಿತು ತಾವ್ಡೆ ಸೋಮವಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ದಿಯಾ ಮಿರ್ಜಾ ಅವರು ವಿಭಜಕ ಶಕ್ತಿಗಳ ಪರವಾಗಿದ್ದಾರೆ ಮತ್ತು ನೀಟ್ ಪರೀಕ್ಷೆಯ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರೋಲ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ನಟಿಯನ್ನು ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಹೇಳಿದ್ದಾರೆ.
ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ದಿಯಾ ಮಿರ್ಜಾ, ಅಭಿಯಾನದಲ್ಲಿ ಭಾಗವಹಿಸಲು ತಾನು ಯಾವುದೇ ಹಣ ಪಡೆದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ನಾನು ಇದಕ್ಕಾಗಿ ಯಾವುದೇ ಹಣ ಪಡೆದಿಲ್ಲ. ಈಗ ಒಳ್ಳೆಯತನಕ್ಕೆ ಬೆಲೆಯೇ ಇಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.


