ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಸರ್ಕಾರಿ ಕಡತಗಳನ್ನು(government files) ಕಸದ ತೊಟ್ಟಿಗೆ ಎಸೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ತಾಲೂಕು ಕಚೇರಿಯಲ್ಲಿ, ಇದೀಗ ಜಿಲ್ಲಾ ಪಂಚಾಯಿತಿ ಅನುದಾನಕ್ಕೆ ಸಂಬಂಧಿಸಿದ ಮಹತ್ವದ ಕಡತಗಳನ್ನು(government files) ಗುಜರಿಗೆ ಹಾಕುವ ಮೂಲಕ ಮತ್ತೊಂದು ಗಂಭೀರ ಎಡವಟ್ಟು ಎಸಗಲಾಗಿದೆ.
ತಾಲೂಕು ಕಚೇರಿಯ ಆವರಣದಲ್ಲಿ ಸರ್ಕಾರಿ ದಾಖಲೆಗಳನ್ನು ಕಸದ ಹೆಸರಿನಲ್ಲಿ ಗುಜರಿ ಆಟೋಗೆ ತುಂಬುತ್ತಿದ್ದ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಟೋದಲ್ಲಿದ್ದ ಕಡತಗಳನ್ನು ಪರಿಶೀಲಿಸಿದಾಗ, ಅವು ಜಿಲ್ಲಾ ಪಂಚಾಯಿತಿಯ ವಿವಿಧ ಅನುದಾನ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಎಂಬುದು ಬಯಲಾಗಿದೆ.
ಅಕ್ರಮ ಮುಚ್ಚಿಹಾಕಲು ದಾಖಲೆ ನಾಶದ ಸಂಚು?
ಕಸ ವಿಲೇವಾರಿ ಹೆಸರಿನಲ್ಲಿ ಇಂತಹ ಪ್ರಮುಖ ದಾಖಲೆಗಳನ್ನು ಗುಜರಿಗೆ ಹಾಕಿಸುತ್ತಿರುವುದರ ಹಿಂದೆ ಭಾರೀ ಅನುಮಾನಗಳು ವ್ಯಕ್ತವಾಗಿವೆ. ಅನುದಾನ ಬಳಕೆಯಲ್ಲಿ ನಡೆದಿರಬಹುದಾದ ಅಕ್ರಮ, ಗೋಲ್ಮಾಲ್ ಮುಚ್ಚಿಹಾಕಲು ಅಧಿಕಾರಿಗಳೇ ವ್ಯವಸ್ಥಿತವಾಗಿ ಕಡತಗಳನ್ನು ನಾಶಪಡಿಸಲು ಮುಂದಾಗಿದ್ದಾರೆಯೇ ಎಂಬ ಗಂಭೀರ ಸಂಶಯ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಮೇಲಧಿಕಾರಿಗಳ ಆದೇಶವೆಂದ ಸಿಬ್ಬಂದಿ:
ಸ್ಥಳೀಯರು ಸಿಬ್ಬಂದಿಯನ್ನು ತೀವ್ರವಾಗಿ ಪ್ರಶ್ನಿಸಿದಾಗ, “ಮೇಲಧಿಕಾರಿಗಳ ಸೂಚನೆಯ ಮೇರೆಗೆ ಇವುಗಳನ್ನು ಕಸವೆಂದು ಭಾವಿಸಿ ಗುಜರಿಗೆ ಸಾಗಿಸಲಾಗುತ್ತಿದೆ” ಎಂದು ಉತ್ತರಿಸಿ ಜಾರಿಕೊಳ್ಳಲು ಯತ್ನಿಸಿದ್ದಾರೆ.
ಸಾರ್ವಜನಿಕರ ತೆರಿಗೆ ಹಣ ಹಾಗೂ ಸರ್ಕಾರದ ಅಭಿವೃದ್ಧಿ ಯೋಜನೆಗಳ ದಾಖಲೆಗಳನ್ನು ರಕ್ಷಿಸಬೇಕಾದ ಕಚೇರಿಯಲ್ಲೇ ಈ ರೀತಿ ಗುಜರಿ ಅಂಗಡಿಗೆ ಎಸೆಯುತ್ತಿರುವುದಕ್ಕೆ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಕಾರಣರಾದ ಬೇಜವಾಬ್ದಾರಿ ಸಿಬ್ಬಂದಿ ಹಾಗೂ ಇದಕ್ಕೆ ಆದೇಶಿಸಿದ ಮೇಲಧಿಕಾರಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




