ಸ್ಟಿಂಗ್‌ ಆಪರೇಷನ್‌ ಸಂಚಲನ: ದೆಹಲಿಯಲ್ಲಿ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ | Siddaramaiah

Sting operation creates a stir Former CM Siddaramaiah meets Rahul Gandhi in Delhi

ನವದೆಹಲಿ: ಕರ್ನಾಟಕ ರಾಜಕೀಯ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ(Siddaramaiah) ವಿರುದ್ಧದ ರಹಸ್ಯ ಕಾರ್ಯಾಚರಣೆ (Sting Operation) ವಿವಾದ ಇದೀಗ ರಾಷ್ಟ್ರ ರಾಜಧಾನಿಯ ಮಟ್ಟದಲ್ಲೂ ಭಾರೀ ಸಂಚಲನ ಸೃಷ್ಟಿಸಿದೆ. ಈ ಪ್ರಮುಖ ರಾಜಕೀಯ ಬೆಳವಣಿಗೆಯ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ(Former CM Siddaramaiah) ಅವರು ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi )ಅವರನ್ನು ಭೇಟಿಯಾಗಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಈ ಉನ್ನತ ಮಟ್ಟದ ಭೇಟಿಯ ವೇಳೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಸಿಎಂ ಅವರ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜೊತೆಗಿದ್ದರು. ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಪ್ರಕರಣದ(Sting Operation) ಹಿನ್ನೆಲೆ, ಅದರ ಸುತ್ತಲಿನ ರಾಜಕೀಯ ತಂತ್ರಗಾರಿಕೆ ಹಾಗೂ ಸದ್ಯದ ಬೆಳವಣಿಗೆಗಳ ಕುರಿತು ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಅವರೊಂದಿಗೆ ಸುದೀರ್ಘವಾಗಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೆಚ್‌ಡಿಕೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ:

ಇನ್ನೊಂದೆಡೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆಸಿದ ಪತ್ರಿಕಾಗೋಷ್ಠಿಗೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು ನೀಡಿದ್ದಾರೆ. “ಕುಮಾರಸ್ವಾಮಿ ಅವರಿಗೆ ಬೇರೆ ಕೆಲಸವಿಲ್ಲದೆ ಪ್ರತಿದಿನ ಹೊಸ ಹೊಸ ಆರೋಪಗಳನ್ನು ಮಾಡುತ್ತಾ ‘ಹಿಟ್ ಆಂಡ್ ರನ್’ ರಾಜಕಾರಣ ಮುಂದುವರಿಸಿದ್ದಾರೆ. ತನಿಖೆಯ ಬಗ್ಗೆ ಅವರಿಗೆ ಯಾಕಿಷ್ಟು ಆತುರ ಮತ್ತು ಆತಂಕ?” ಎಂದು ಖರ್ಗೆ ತರಾಟೆಗೆ ತೆಗೆದುಕೊಂಡರು.

ದೆಹಲಿಯಲ್ಲಿರುವ ಕುಮಾರಸ್ವಾಮಿ ಅವರ ನಿವಾಸದ ವಿಳಾಸದಲ್ಲೇ ಮೊಬೈಲ್ ಪತ್ತೆಯಾಗಿದೆ ಎಂಬ ಪೊಲೀಸ್ ಆಯುಕ್ತರ ಹೇಳಿಕೆಯನ್ನು ಸಮರ್ಥಿಸಿದ ಸಚಿವರು, “ಈ ಕುರಿತು ನಮ್ಮ ಬಳಿ ಅಗತ್ಯ ಸಾಕ್ಷ್ಯಾಧಾರಗಳಿವೆ. ಸೂಕ್ತ ಸಂದರ್ಭ ಬಂದಾಗ ಪ್ರತಿಯೊಂದನ್ನೂ ಬಹಿರಂಗಪಡಿಸಲಾಗುವುದು. ಪೊಲೀಸರು ಸಲ್ಲಿಸಲಿರುವ ಚಾರ್ಜ್‌ಶೀಟ್‌ನಲ್ಲಿ ಸತ್ಯಾಂಶ ಹೊರಬರಲಿದೆ. ಸಿದ್ದರಾಮಯ್ಯ ಅವರಿಗೆ ರಾಜ್ಯ ಸರ್ಕಾರದ ಮೇಲೂ ಹಾಗೂ ನನ್ನ ಮೇಲೂ ಸಂಪೂರ್ಣ ವಿಶ್ವಾಸವಿದೆ” ಎಂದು ನೇರವಾಗಿ ತಿರುಗೇಟು ನೀಡಿದರು.

ಒಟ್ಟಾರೆಯಾಗಿ ಮಾಜಿ ಸಿಎಂ ಸಿದ್ಧರಾಮಯ್ಯ( Siddaramaiah) ಅವರು ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಸಿದ್ಧರಾಮಯ್ಯ ಅವರ ಭೇಟಿಯು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.