ನವದೆಹಲಿ/ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ(Bangladesh Ex Prime Minister Sheikh) ಅವರು ತಾಯ್ನಾಡಿಗೆ ಮರಳಲು ಪ್ರಕ್ರಿಯೆ ಆರಂಭಿಸಿದ್ದು, ಹೊಸ ಪಾಸ್ಪೋರ್ಟ್ ಹಾಗೂ ರಾಷ್ಟ್ರೀಯ ಗುರುತಿನ ಚೀಟಿ (NID) ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಶೇಖ್ ಹಸೀನಾ (Sheikh Hasina) ಅವರಿಗೆ ಯಾವುದೇ ಹೊಸ ದಾಖಲೆಗಳನ್ನು ನೀಡದೆ, ದ್ವಿಪಕ್ಷೀಯ ಗಡೀಪಾರು ಒಪ್ಪಂದದ ಅಡಿಯಲ್ಲಿ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಢಾಕಾದ ಮಧ್ಯಂತರ ಸರ್ಕಾರ ಭಾರತವನ್ನು ಒತ್ತಾಯಿಸಿದೆ.
ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ನವದೆಹಲಿಯಲ್ಲಿರುವ ಬಾಂಗ್ಲಾದೇಶ ರಾಯಭಾರ ಕಚೇರಿಯ ಹಂಗಾಮಿ ಹೈಕಮಿಷನರ್ ಪ್ರೀತಿ ರೆಹಮಾನ್ ಅವರಿಗೆ ಹಸೀನಾ ಅವರ ಕಾನೂನು ಪ್ರತಿನಿಧಿಗಳು ಅಧಿಕೃತ ಪತ್ರ ರವಾನಿಸಿದ್ದಾರೆ. ಲಂಡನ್ ಮೂಲದ ‘ಮ್ಯಾಟ್ರಿಕ್ಸ್ ಚೇಂಬರ್ಸ್’ ಸಂಸ್ಥೆಯ ವಕೀಲರು ಬರೆದಿರುವ ಈ ಪತ್ರದಲ್ಲಿ, “ಮಧ್ಯಂತರ ಸರ್ಕಾರವು ಹಸೀನಾ ಅವರ ಹಿಂದಿನ ಪಾಸ್ಪೋರ್ಟ್ ಮತ್ತು ಗುರುತಿನ ಚೀಟಿಯನ್ನು ರದ್ದುಗೊಳಿಸಿದೆ. ಆದ್ದರಿಂದ ಅವರ ಪೌರತ್ವ ಹಕ್ಕು ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಒಪ್ಪಂದಗಳ ಅನ್ವಯ ಅವರಿಗೆ ತುರ್ತಾಗಿ ಹೊಸ ದಾಖಲೆಗಳನ್ನು ವಿತರಿಸಬೇಕು” ಎಂದು ಮನವಿ ಮಾಡಲಾಗಿದೆ.
ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗಲು ಹಸೀನಾ ನಿರ್ಧರಿಸಿದ್ದು, ಅಗತ್ಯ ದಾಖಲೆಗಳು ಕೈಸೇರಿದ ತಕ್ಷಣ ವಾಪಸಾತಿಯ ನಿಖರ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರ ನಿಕಟವರ್ತಿಗಳು ಸ್ಪಷ್ಟಪಡಿಸಿದ್ದಾರೆ.
“ಅಪರಾಧಿಗಳನ್ನು ಬಂಧಿಸಲು ಪಾಸ್ಪೋರ್ಟ್ ಬೇಕಿಲ್ಲ”: ಬಾಂಗ್ಲಾ ಸಚಿವರ ಕಿಡಿ
ಹಸೀನಾ(Sheikh Hasina) ಅವರ ಈ ನಡೆಯನ್ನು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ತೀವ್ರವಾಗಿ ತಳ್ಳಿಹಾಕಿದ್ದಾರೆ. ಬಾಂಗ್ಲಾದ ‘ದಿ ಡೈಲಿ ಸ್ಟಾರ್’ ಜೊತೆ ಮಾತನಾಡಿದ ಅವರು, “ಹಸೀನಾ ಅವರ ಹಸ್ತಾಂತರವೇ ನಮ್ಮ ಪ್ರಮುಖ ಬೇಡಿಕೆ. ಅವರು ಒಬ್ಬ ಉಗ್ರವಾದಿ ಮತ್ತು ದೇಶಭ್ರಷ್ಟೆ. ಭಾರತ ಮತ್ತು ಬಾಂಗ್ಲಾದೇಶದ ನಡುವೆ ಈಗಾಗಲೇ ಗಡೀಪಾರು ಒಪ್ಪಂದ ಅಸ್ತಿತ್ವದಲ್ಲಿದೆ” ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಪಾಸ್ಪೋರ್ಟ್ ಪಡೆದು ಬರಲು ಆಕೆಯೇನು ರಂಗ್ಪುರದಲ್ಲಿರುವ ತನ್ನ ಅತ್ತೆಯ ಮನೆಗೆ ಭೇಟಿ ನೀಡಲು ಹೊರಟಿದ್ದಾರೆಯೇ? ಅಪರಾಧಿಗಳು ಮತ್ತು ಉಗ್ರರನ್ನು ಬಂಧಿಸಲು ಯಾವುದೇ ಪಾಸ್ಪೋರ್ಟ್ ಅಗತ್ಯವಿಲ್ಲ. ಇದು ಹಸ್ತಾಂತರದ ವಿಷಯವಾಗಿದ್ದು, ಕಾನೂನು ಪ್ರಕ್ರಿಯೆಯ ಮೂಲಕವೇ ಅವರನ್ನು ವಶಕ್ಕೆ ಪಡೆಯಲಿದ್ದೇವೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮರಳಲು ನಿರ್ಧರಿಸಿದ್ದೇಕೆ?
2024ರ ಆಗಸ್ಟ್ನಲ್ಲಿ ನಡೆದ ಭೀಕರ ವಿದ್ಯಾರ್ಥಿ ದಂಗೆಯಿಂದಾಗಿ ಹಸೀನಾ ಅವರ 20 ವರ್ಷಗಳ ಸುದೀರ್ಘ ಆಡಳಿತ ಅಂತ್ಯಗೊಂಡು, ಅವರು ಭಾರತಕ್ಕೆ ಪಲಾಯನ ಮಾಡಬೇಕಾಯಿತು. ಪ್ರತಿಭಟನಾಕಾರರ ಮೇಲೆ ನಡೆಸಲಾದ ಮಾರಣಾಂತಿಕ ದಮನಕಾಂಡದ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT) 2025ರ ನವೆಂಬರ್ನಲ್ಲಿ ಅವರ ಗೈರುಹಾಜರಿಯಲ್ಲೇ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು.
ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಹಸೀನಾ, ಸ್ವದೇಶಕ್ಕೆ ಮರಳಿ ನ್ಯಾಯಾಲಯವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಪ್ರಸ್ತುತ ಬಾಂಗ್ಲಾದೇಶದಲ್ಲಿ ಅವರ ಪಕ್ಷವಾದ ‘ಅವಾಮಿ ಲೀಗ್’ ಅನ್ನು ನಿಷೇಧಿಸಲಾಗಿದ್ದು, ಪಕ್ಷದ ಅನೇಕ ಮುಖಂಡರು ಜೈಲುಪಾಲಾಗಿದ್ದಾರೆ ಅಥವಾ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ.
ಬಿಗಿಗೊಂಡ ಭಾರತ-ಬಾಂಗ್ಲಾ ರಾಜತಾಂತ್ರಿಕ ಸಂಬಂಧ
ಹಸೀನಾ ಅವರಿಗೆ ನವದೆಹಲಿ ಆಶ್ರಯ ನೀಡಿದ ದಿನದಿಂದಲೂ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ. ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾ ಸರ್ಕಾರ ಸಲ್ಲಿಸಿರುವ ಮನವಿಯನ್ನು ಭಾರತ ಸದ್ಯ ಪರಿಶೀಲಿಸುತ್ತಿದೆ.
ಹಸೀನಾ ಅವರ ಮರುಪ್ರವೇಶವು ಬಾಂಗ್ಲಾದೇಶದ ಒಳಗೆ ಮತ್ತಷ್ಟು ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಆತಂಕವಿದೆ. ಒಂದೆಡೆ ಅವರ ಬೆಂಬಲಿಗರು ಸಕ್ರಿಯರಾಗುವ ಸಾಧ್ಯತೆಯಿದ್ದರೆ, ಮತ್ತೊಂದೆಡೆ ವಿರೋಧಿಗಳು ಕಠಿಣ ಶಿಕ್ಷೆಗೆ ಪಟ್ಟುಹಿಡಿದಿದ್ದಾರೆ. ಈ ಬೆಳವಣಿಗೆಗಳ ನಡುವೆ, ಹಸೀನಾ ಅವರ ಹೊಸ ಪಾಸ್ಪೋರ್ಟ್ ಬೇಡಿಕೆಯು ನವದೆಹಲಿ ಮತ್ತು ಢಾಕಾ ನಡುವಿನ ರಾಜತಾಂತ್ರಿಕ ಕಗ್ಗಂಟನ್ನು ಮತ್ತಷ್ಟು ಜಟಿಲಗೊಳಿಸಿದೆ.




