ಶಿವಮೊಗ್ಗ: ಮಧ್ಯಮ ವರ್ಗದ ಕೃಷಿಕ ಕುಟುಂಬದಿಂದ ಬಂದು, ಕಠಿಣ ಪರಿಶ್ರಮ ಹಾಗೂ ಛಲದಿಂದ ಭಾರತೀಯ ಅರಣ್ಯ ಸೇವೆಗೆ (IFS) ಆಯ್ಕೆಯಾಗಿ, ರಾಜ್ಯದ ಅತ್ಯಂತ ಸವಾಲಿನ ಅರಣ್ಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿರುವ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಆಗಿದ್ದ ಪ್ರಸನ್ನ ಕೃಷ್ಣ ಪಟಗಾರ(DCF Prasannakrishna Patagar) ಅವರು ತಮ್ಮ ಜೀವನ, ವೃತ್ತಿಪರ ಸವಾಲುಗಳು ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
ತಂದೆಯೇ ಬೆನ್ನೆಲುಬು: ಕುಮಟಾದಿಂದ ಶಿರಸಿಯವರೆಗಿನ ವಿದ್ಯಾಭ್ಯಾಸ
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರಾದ ಪ್ರಸನ್ನ ಕೃಷ್ಣ ಪಟಗಾರ ಅವರ ತಂದೆ ಕೃಷ್ಣ ಪಟಗಾರ ಮೂಲತಃ ಕೃಷಿಕರಾಗಿದ್ದು, ಜೊತೆಗೆ ಪಿಗ್ಮಿ ಸಂಗ್ರಹ ಹಾಗೂ ದಸ್ತಾವೇಜು ಬರಹಗಾರರಾಗಿ (Deed Writer) ಕೆಲಸ ಮಾಡುತ್ತಿದ್ದರು. ಎರಡು ಎಕರೆ ಜಮೀನಿನಲ್ಲಿ ಮನೆಗೆ ಸಾಕಾಗುವಷ್ಟು ಭತ್ತ ಮತ್ತು ತೆಂಗು ಬೆಳೆಯುತ್ತಿದ್ದ ಮಧ್ಯಮ ವರ್ಗದ ಕುಟುಂಬ ಇವರದಾಗಿತ್ತು.
ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಇವರನ್ನು ಹಾಗೂ ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾ ಮಾಡಿರುವ ಇವರ ಅಣ್ಣನನ್ನು ತಂದೆಯವರೇ ಏಕಾಂಗಿಯಾಗಿ ದುಡಿದು ಓದಿಸಿದರು. ಅತ್ತೆಯಂದಿರು ಹಾಗೂ ಸಂಬಂಧಿಕರ ಭಾವನಾತ್ಮಕ ಬೆಂಬಲದೊಂದಿಗೆ ಬೆಳೆದ ಇವರು, ಕುಮಟಾದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಹಾತ್ಮ ಗಾಂಧಿ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಹಾಗೂ ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ (College of Forestry) ಬಿ.ಎಸ್ಸಿ (Forestry) ಪದವಿ ಪಡೆದರು.
ಐಎಫ್ಎಸ್ ಕನಸು ಮತ್ತು ಎಸಿಎಫ್ (ACF) ಆಯ್ಕೆ
ಶಿರಸಿ ಕಾಲೇಜಿನಲ್ಲಿ ಓದುವಾಗ ಪ್ರತಿ ವರ್ಷ ಐಎಫ್ಎಸ್ಗೆ ಆಯ್ಕೆಯಾಗುತ್ತಿದ್ದ ಹಿರಿಯ ವಿದ್ಯಾರ್ಥಿಗಳೇ ಇವರಿಗೆ ಸ್ಫೂರ್ತಿಯಾದರು. ಪದವಿಯ ನಂತರ ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಎಂ.ಎಸ್ಸಿ (M.Sc) ಸೇರಿದ ಇವರು, ಜೂನಿಯರ್ ರಿಸರ್ಚ್ ಫೆಲೋ (JRF) ಆಗಿ ಸ್ಟೈಫಂಡ್ ಪಡೆಯುತ್ತಾ ಮನೆಯವರಿಗೆ ಆರ್ಥಿಕ ಹೊರೆಯಾಗದಂತೆ ಓದು ಮುಂದುವರಿಸಿದರು.
ಇದೇ ಸಮಯದಲ್ಲಿ ಕೆಪಿಎಸ್ಸಿ (KPSC) ಮೂಲಕ ಎಸಿಎಫ್ ಹುದ್ದೆಗೆ ಅರ್ಜಿ ಸಲ್ಲಿಸಿ, 2009ರಲ್ಲಿ ರಾಜ್ಯಕ್ಕೆ ಉತ್ತಮ ಅಂಕಗಳೊಂದಿಗೆ ಆಯ್ಕೆಯಾದರು. ಕೊಯಮತ್ತೂರಿನ ‘ಕ್ಯಾಸ್ಫಾಸ್’ (CASFOS) ಸಂಸ್ಥೆಯಲ್ಲಿ ಎರಡು ವರ್ಷಗಳ ತರಬೇತಿ ಮುಗಿಸಿ, ಶಿರಸಿ ವಿಭಾಗದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕೆಲಸವನ್ನು ಆರಂಭಿಸಿದರು.
ಅಂದಿನ ಡಿಸಿಎಫ್ ಮನೋಜ್ ಕುಮಾರ್ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಸುಭಾಸ ಮಾಳ್ಕೇಡೆ ಅವರ ಮಾರ್ಗದರ್ಶನದಲ್ಲಿ ಅರಣ್ಯ ಆಡಳಿತದ ಪಟ್ಟುಗಳನ್ನು ಕಲಿತರು. ನಂತರ ಭಟ್ಕಳ ವಲಯದ ಆರ್ಎಫ್ಒ ಆಗಿ 6 ತಿಂಗಳು ಸೇವೆ ಸಲ್ಲಿಸಿ, ಅಕ್ರಮ ಕಡಿತಲೆ, ಅತಿಕ್ರಮಣ ಮತ್ತು ಬೇಟೆ ನಿಯಂತ್ರಣದ ಅನುಭವ ಪಡೆದರು.
ನಾಗರಹೊಳೆಯಲ್ಲಿ ಬೆಂಕಿ ನಿಯಂತ್ರಣ ಮತ್ತು ಪುನರ್ವಸತಿ ಸವಾಲು
ಬೆಳಗಾವಿ ವೃತ್ತದಲ್ಲಿ ಸಿಸಿಎಫ್ ವಿಜಯ್ ಮೋಹನ್ ರಾಜ್ ಅವರ ಬಳಿ ತಾಂತ್ರಿಕ ಸಹಾಯಕರಾಗಿ (TA) ಮೂರು ವರ್ಷ ಸೇವೆ ಸಲ್ಲಿಸಿದ ನಂತರ, 2015ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪವಿಭಾಗಕ್ಕೆ ಎಸಿಎಫ್ ಆಗಿ ನೇಮಕಗೊಂಡರು. ಅಲ್ಲಿ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ, ಹುಲಿ ಸಂರಕ್ಷಣಾ ಯೋಜನೆ (TCP) ಜಾರಿ ಹಾಗೂ ಜೇನುಕುರುಬ ಮತ್ತು ಕಾಡುಕುರುಬ ಹಾಡಿಗಳ ಜನರ ಮನವೊಲಿಸಿ ಪುನರ್ವಸತಿ (Rehabilitation) ಕಲ್ಪಿಸುವ ಕೆಲಸ ಮಾಡಿದರು.
ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮ, ಇವರ ಎರಡು ವರ್ಷಗಳ ಅವಧಿಯಲ್ಲಿ ನಾಗರಹೊಳೆಯಲ್ಲಿ ಒಂದೇ ಒಂದು ಕಾಡ್ಗಿಚ್ಚಿನ (Fire incident) ಪ್ರಕರಣವೂ ವರದಿಯಾಗದಂತೆ ತಡೆಯುವಲ್ಲಿ ಯಶಸ್ವಿಯಾದರು.
ಕರಾವಳಿ ವಲಯ ನಿರ್ವಹಣೆ ಮತ್ತು ಬ್ಲೂ ಫ್ಲ್ಯಾಗ್ ಬೀಚ್ ಗೌರವ
2017ರಲ್ಲಿ ಡಿಸಿಎಫ್ ಆಗಿ ಬಡ್ತಿ ಪಡೆದ ಇವರು, ಕಾರವಾರದಲ್ಲಿ ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕರಾಗಿ ನೇಮಕಗೊಂಡರು. ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳ ಅಡಿಯಲ್ಲಿ, ಚೆನ್ನೈನ ಎನ್ಸಿಎಸ್ಸಿಎಂ (NCSCM) ಸಂಸ್ಥೆಯ ಸಹಯೋಗದೊಂದಿಗೆ ಕರಾವಳಿಯ ಪ್ರತಿ ಗ್ರಾಮದ ನಕ್ಷೆ ಸಿದ್ಧಪಡಿಸಿ, ಎರಡು ಬಾರಿ ‘ಕರಾವಳಿ ವಲಯ ನಿರ್ವಹಣಾ ಯೋಜನೆ’ಗೆ (CZMP) ಅನುಮೋದನೆ ಪಡೆದರು.
ಗೋಕರ್ಣದಂತಹ ಪ್ರದೇಶಗಳಲ್ಲಿ ಅನಿಯಂತ್ರಿತ ಅಭಿವೃದ್ಧಿಯನ್ನು ಒಂದೆಡೆಯಾದರೇ, ಹೊನ್ನಾವರದ ಕಾಸರಕೋಡು ಬೀಚ್ಗೆ ಅಂತಾರಾಷ್ಟ್ರೀಯ ಮಟ್ಟದ ‘ಬ್ಲೂ ಫ್ಲ್ಯಾಗ್’ (Blue Flag) ಮಾನ್ಯತೆ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶಿವಮೊಗ್ಗ ವನ್ಯಜೀವಿ ವಿಭಾಗದ ಸವಾಲುಗಳು ಮತ್ತು ಶೆಟ್ಟಿಹಳ್ಳಿ ಗಡಿ ಸಮಸ್ಯೆ
2022ರ ಜನವರಿಯಲ್ಲಿ ಐಎಫ್ಎಸ್ (2015ರ ಬ್ಯಾಚ್) ದೃಢೀಕರಣಗೊಂಡು ಡೆಹ್ರಾಡೂನ್ನಲ್ಲಿ ತರಬೇತಿ ಮುಗಿಸಿದ ನಂತರ, ಜನವರಿ 2023ರಲ್ಲಿ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಆಗಿ ಅಧಿಕಾರ ವಹಿಸಿಕೊಂಡರು. ಬಂಡೀಪುರ ಅಥವಾ ನಾಗರಹೊಳೆಗೆ ಹೋಲಿಸಿದರೆ ಶಿವಮೊಗ್ಗದ ಶೆಟ್ಟಿಹಳ್ಳಿ ಮತ್ತು ಶರಾವತಿ ಅಭಯಾರಣ್ಯಗಳಲ್ಲಿ ಜನವಸತಿ ಮತ್ತು ಅತಿಕ್ರಮಣದ ಸವಾಲುಗಳು ತೀವ್ರವಾಗಿವೆ.
1974ರಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯ ಘೋಷಣೆಯಾದಾಗ 5 ಪ್ರಮುಖ ರಸ್ತೆಗಳನ್ನು ಗಡಿಯನ್ನಾಗಿ ಗುರುತಿಸಿದ್ದರಿಂದ ಸುಮಾರು 700 ಚ.ಕಿ.ಮೀ ವ್ಯಾಪ್ತಿಯ ಖಾಸಗಿ ಜಮೀನುಗಳೂ ಅಭಯಾರಣ್ಯದೊಳಗೆ ಸೇರಿಕೊಂಡಿದ್ದವು. ಅಲ್ಲದೆ, ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ 60ರ ದಶಕದಲ್ಲೇ ಬಿಡುಗಡೆಯಾಗಿದ್ದ ಸುಮಾರು 3,400 ಎಕರೆ ಭೂಮಿಯೂ ಇದರ ವ್ಯಾಪ್ತಿಯಲ್ಲಿತ್ತು. ಇವುಗಳನ್ನು ಅಭಯಾರಣ್ಯದಿಂದ ಕೈಬಿಟ್ಟು (Rationalization) ಗಡಿ ಸರಿಪಡಿಸಲು ಮರು-ಸರ್ವೆ ನಡೆಸಿ, ರಾಜ್ಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ಸುಪ್ರೀಂ ಕೋರ್ಟ್ನ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರ ಮಾರ್ಗದರ್ಶನದಲ್ಲಿ ಇವರು ಚುರುಕುಗೊಳಿಸಿದ್ದಾರೆ.
ಸಕ್ರೆಬೈಲು ಆನೆ ಬಿಡಾರ ನಿರ್ವಹಣೆ ಮತ್ತು ಏಷ್ಯಾದ ಮೊದಲ ಶಸ್ತ್ರಚಿಕಿತ್ಸೆ
ಹಲವಾರು ಕೊರತೆ, ಅಗತ್ಯ ಎಲ್ಲಾ ವೈದ್ಯಕೀಯ ಸೌಲಭ್ಯಗಳ ಕೊರತೆಯ ನಡುವೆಯೂ ಸಹ ಸಕ್ರೆಬೈಲು ಆನೆ ಬಿಡಾರವನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ ಒಂದೂವರೆ ವರ್ಷದಿಂದ ಬಿಡಾರಕ್ಕೆ ಕಾಯಂ ವೈದ್ಯರಿಲ್ಲದಿದ್ದರೂ, ರಾಜ್ಯದ ಎಲ್ಲಾ ತಜ್ಞ ವೈದ್ಯರನ್ನು ಹಾಗೂ ಆಗ್ರಾದ ‘ವೈಲ್ಡ್ಲೈಫ್ ಎಸ್ಒಎಸ್’ (Wildlife SOS) ತಂಡವನ್ನು ಕರೆಸಿ ಆನೆಗಳಿಗೆ ಚಿಕಿತ್ಸೆ ನೀಡಲಾಗಿದೆ.
ವಿಶೇಷವಾಗಿ, ‘ಅಡಕ-ಬಡಕ’ ಎಂಬ ಆನೆಯ ಕಾಲು ಮುರಿದಾಗ, ಏಷ್ಯಾದಲ್ಲೇ ಮೊದಲ ಬಾರಿಗೆ ದೊಡ್ಡ ಆನೆಯೊಂದಕ್ಕೆ ಪಶುವೈದ್ಯರಿಂದ ಫೈಬರ್ ಕಾಸ್ಟಿಂಗ್ (Fiber Casting) ಚಿಕಿತ್ಸೆ ನೀಡಿ ಗುಣಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶೇ.60ರಷ್ಟು ಅರಣ್ಯ ರಕ್ಷಕರ (Guard) ಕೊರತೆಯ ನಡುವೆಯೂಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ ಪರಿಣಾಮ, ಕಳೆದ ಮೂರು ವರ್ಷಗಳಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ಕೇವಲ 10-12ಕ್ಕೆ ಇಳಿಕೆಯಾಗಿವೆ. ಕಳೆದ ಎರಡು ವರ್ಷಗಳಲ್ಲಿ ವಿಭಾಗದ ವ್ಯಾಪ್ತಿಯಲ್ಲಿ 150 ಎಕರೆಗೂ ಹೆಚ್ಚು ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.
ವನ್ಯಜೀವಿ ಸಪ್ತಾಹದ ಮೂಲಕ ಯುವಜನರಲ್ಲಿ ಪರಿಸರ ಜಾಗೃತಿ
ವನ್ಯಜೀವಿ ಸಂರಕ್ಷಣೆಯ ಕುರಿತು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹದ ಅಂಗವಾಗಿ ಸೈಕಲ್ ಜಾಥಾ, ಬೈಕ್ ಜಾಥಾ, ಮ್ಯಾರಥಾನ್, ದಸರಾ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ, ಶಾಲಾ ಮಕ್ಕಳಿಗಾಗಿ ‘ಜೂನಿಯರ್ ರೇಂಜರ್ಸ್’ ಕಾರ್ಯಕ್ರಮ ಹಾಗೂ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಆದಿಚುಂಚನಗಿರಿ ಶಾಲೆಯ ಸಹಯೋಗದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ 10 ತಾಲೂಕುಗಳ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿರುವುದು ಇವರ ಪರಿಸರ ಜಾಗೃತಿ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಶರಾವತಿ ಮತ್ತು ಶೆಟ್ಟಿಹಳ್ಳಿ ಭಾಗದ ಜನರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ, ವನ್ಯಜೀವಿಗಳಿಗೆ ಉತ್ತಮ ಆವಾಸಸ್ಥಾನ ನಿರ್ಮಿಸುವ ಕ್ರಮವಾಗಲಿ ಎಂಬುದು ಇವರ ಆಶಯವಾಗಿದೆ.
ಒಟ್ಟಾರೆಯಾಗಿ ಬಿಎಸ್ಸಿ ಕೃಷಿ ಮುಗಿಸಿ ರೈತನಾಗುವ ಹೆಜ್ಜೆ ಇಡಲು ಹೊರಟ ಪ್ರಸನ್ನಕೃಷ್ಣ ಪಟಗಾರ ಅವರು ಮಾತ್ರ ಆಗಿದ್ದು ಅರಣ್ಯಾಧಿಕಾರಿ. ಸದ್ಯ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಹುದ್ದೆಯಿಂದ ಮಡಿಕೇರಿಯ ಡಿಸಿಎಫ್ (ರಿಸರ್ಚ್) ಹುದ್ದೆಗೆ ವರ್ಗಾವಣೆಗೊಂಡಿದ್ದಾರೆ. ಅವರ ಪ್ರತಿಯೊಂದು ಸಾಧನೆಗೆ ಪತ್ನಿ ಸೇವಂತಿ, ಇಬ್ಬರು ಪುತ್ರಿಯರಾದ ತ್ರಿಷಿಕ, ವನಶ್ರೀ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ. ಸಹೋದರ ಅಮರ್ ಸಾಥ್ ನೀಡಿದ್ದಾರೆ. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ. ಅವರ ಅರಣ್ಯ ಸೇವೆ ಮುಂದುವರೆದು, ಇನ್ನೂ ಉನ್ನತ ಹುದ್ದೆಗೆ ಏರಲಿ ಎಂಬುದಾಗಿ ಆಶಿಸೋಣ.
ವಿಶೇಷ ವರದಿ: ವಸಂತ ಬಿ ಈಶ್ವರಗೆರೆ, ಸಂಪಾದರು..




