ಬೆಂಗಳೂರು: ಬಿಎಸ್ಸಿ ಕೃಷಿ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಕೋರ್ಸ್ ಗಳಲ್ಲಿ ಇನ್ನೂ ಸುಮಾರು 290 ಸೀಟು ಬಾಕಿ ಉಳಿದಿದ್ದು, ಅವುಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examinations Authority- KEA) ನ.16ರಿಂದ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದೆ. ಆ ಮೂಲಕ ಕೃಷಿ, ಪಶು ವೈದ್ಯಕೀಯ ಉಳಿಕೆ ಸೀಟುಗಳಿಗೆ ನ.18ರಿಂದ ಮತ್ತೊಂದು ಸುತ್ತು ಕೌನ್ಸೆಲಿಂಗ್ ಗೆ ಕೆಇಎ(KEA) ನಿರ್ಧರಿಸಿದೆ.
ಉಳಿಕೆ ಸೀಟುಗಳನ್ನು ಭರ್ತಿ ಮಾಡಿಕೊಡುವಂತೆ ಕೃಷಿ ಮತ್ತು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಕೋರಿಕೆ ಸಲ್ಲಿಸಿದ್ದು ಆ ಪ್ರಕಾರ ಸೀಟು ಹಂಚಿಕೆ ಪ್ರಕ್ರಿಯೆ ನಡೆಯಲಿದೆ. ನ.16ರಂದು ಉಳಿಕೆ ಸೀಟುಗಳ ವಿವರ ಪ್ರಕಟಿಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಈಗಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಪಡೆದಿರುವ ಅರ್ಹರು ಸಂಬಂಧಪಟ್ಟ ಕಾಲೇಜುಗಳಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡ ನಂತರ ಆಪ್ಷನ್ಸ್ ದಾಖಲಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕೃಷಿ ವಿಜ್ಞಾನ ಹಾಗೂ ಪಶು ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆ ಮಾಡಿಕೊಂಡು, ನಂತರ ರದ್ದುಪಡಿಸಿಕೊಂಡವರು ಪುನಃ ಅದೇ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅವಕಾಶ ಇರುವುದಿಲ್ಲ. ಹಾಗೆಯೇ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳಿಗೆ ಸೇರಿರುವ ಹಾಗೂ 4ನೇ ಸುತ್ತು ಮತ್ತು ನಂತರದ ಸುತ್ತುಗಳಲ್ಲಿ ಸೀಟು ಹಂಚಿಕೆಯಾದವರು ಕೂಡ ಈ ಸುತ್ತಿನಲ್ಲಿ ಸೀಟು ಪಡೆಯಲು ಅರ್ಹರಿರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.
ಇತರೆ ಕೋರ್ಸ್ ಗಳಿಗೆ ಪಾವತಿಸಿದ ಶುಲ್ಕವನ್ನು ಈ ಸುತ್ತಿನಲ್ಲಿ ಹಂಚಿಕೆಯಾಗುವ ಸೀಟಿಗೆ ಹೊಂದಾಣಿಕೆ ಮಾಡುವುದಿಲ್ಲ. ಬದಲಾಗಿ ಹೊಸದಾಗಿ ಶುಲ್ಕ ಪಾವತಿಸಬೇಕು. ಮುಂಗಡ ಪಾವತಿ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ನ.18ರೊಳಗೆ ₹35 ಸಾವಿರ ಮುಂಗಡ ಪಾವತಿಸಬೇಕು. ನ.19ರಂದು ಬೆಳಿಗ್ಗೆ 10ಗಂಟೆಯೊಳಗೆ ಆಪ್ಷನ್ಸ್ ದಾಖಲಿಸಬೇಕು. ಅಂದೇ ಸಂಜೆ 5ಗಂಟೆಗೆ ತಾತ್ಕಾಲಿಕ ಫಲಿತಾಂಶ ಹಾಗೂ ನ.20ರಂದು ಬೆಳಿಗ್ಗೆ 10ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ನ.21ರೊಳಗೆ ಶುಲ್ಕ ಪಾವತಿಸಿ, ಅಂದೇ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕು ಎಂದು ಅವರು ವಿವರಿಸಿದ್ದಾರೆ.




