ಖ್ಯಾತ ಟಾಲಿವುಡ್ ಹಿರಿಯ ನಟ ಗಿರಿ ಬಾಬು ವಿಧಿವಶ | Actor Giri Babu

Renowned Tollywood veteran actor Giri Babu passes away

ಹೈದರಾಬಾದ್: ಟಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಗಿರಿ ಬಾಬು (83) (Renowned Tollywood veteran actor Giri Babu) ಅವರು ಶನಿವಾರ (ನವೆಂಬರ್ 14, 2026) ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಟ ಗಿರಿ ಬಾಬು (Actor Giri Babu) ಅವರನ್ನು ಹೈದರಾಬಾದ್‌ನ ಕೊಂಡಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತೆಲುಗು ಚಿತ್ರರಂಗದ ಗಣ್ಯರು, ಸಹಕಲಾವಿದರು ಹಾಗೂ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ

1943ರ ಜೂನ್ 8ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರವಿನೂತಲ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ನಟ ಗಿರಿ ಬಾಬು(Actor Giri Babu) ಅವರ ಮೂಲ ಹೆಸರು ಯರ್ರಾ ಶೇಷಗಿರಿ ರಾವ್. ಬಾಲ್ಯದಿಂದಲೂ ಕಲೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಅವರು, ನಾಟಕಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 1973ರಲ್ಲಿ ತೆರೆಕಂಡ ‘ಜಗಮೇ ಮಾಯ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು, ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಬಣ್ಣ ಹಚ್ಚಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಎಲ್ಲಾ ಬಗೆಯ ಪಾತ್ರಗಳಿಗೂ ಸೈ ಎಂದಿದ್ದ ಕಲಾವಿದ

ಕೇವಲ ಒಂದೇ ಇಮೇಜ್‌ಗೆ ಅಂಟಿಕೊಳ್ಳದ ಗಿರಿ ಬಾಬು, ನಾಯಕನಾಗಿ, ಖಳನಾಯಕನಾಗಿ, ಹಾಸ್ಯ ಕಲಾವಿದನಾಗಿ ಹಾಗೂ ಪೋಷಕ ನಟನಾಗಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದರು. 1977ರ ಪೌರಾಣಿಕ ಸಿನಿಮಾ ‘ಕುರುಕ್ಷೇತ್ರಂ’ನಲ್ಲಿ ಅವರು ನಿರ್ವಹಿಸಿದ್ದ ದುಶ್ಯಾಸನನ ಪಾತ್ರ ಅವರಿಗೆ ವ್ಯಾಪಕ ಜನಪ್ರಿಯತೆ ತಂದುಕೊಟ್ಟಿತ್ತು. ‘ಜ್ಯೋತಿ’, ‘ಪಾಸಿವಾಡಿ ಪ್ರಾಣಂ’, ‘ಹಲೋ ಬ್ರದರ್’, ‘ಸಿಸಿಂದ್ರಿ’, ‘ನಿನ್ನೇ ಪೆಳ್ಳಾಡತಾ’, ‘ಚಂದ್ರಲೇಖಾ’ ಅಲ್ಲದೆ ಇತ್ತೀಚಿನ ದಿನಗಳ ‘ಗಮ್ಯಂ’, ‘ಅ ಆ’, ‘ಗೀತಾ ಗೋವಿಂದಂ’ ಹಾಗೂ ‘ಜಾತಿ ರತ್ನಾಲು’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2023ರಲ್ಲಿ ಬಿಡುಗಡೆಯಾದ ‘ಅನ್ನಿ ಮಂಚಿ ಶಕುನಮುಲೆ’ ಅವರ ವೃತ್ತಿಜೀವನದ ಕೊನೆಯ ಚಿತ್ರವಾಗಿ ಉಳಿದಿದೆ.

ನಿರ್ಮಾಣ ಮತ್ತು ನಿರ್ದೇಶನದಲ್ಲೂ ಛಾಪು

ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದಲ್ಲೂ ಗಿರಿ ಬಾಬು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ‘ಸಿಂಹ ಗರ್ಜನ’, ‘ಮೆರುಪುದಾಡಿ’ ಹಾಗೂ ‘ದೇವತಲಾರ ದೀವಿಸಂಡಿ’ ಮುಂತಾದ ಚಿತ್ರಗಳಿಗೆ ಬಂಡವಾಳ ಹೂಡಿದ್ದ ಅವರು, ‘ರಣರಂಗಂ’, ‘ಇಂದ್ರಜಿತ್’ ಮತ್ತು ‘ನೀ ಸುಖಮೇ ನೇ ಕೋರುಕುನ್ನಾ’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದರು.

ಕುಟುಂಬದ ಹಿನ್ನೆಲೆ

ಗಿರಿ ಬಾಬು ಅವರ ಪತ್ನಿ ಶ್ರೀದೇವಿ ಅವರು 2016ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಪುತ್ರ ರಘು ಬಾಬು ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ಹಾಗೂ ಪೋಷಕ ನಟರಾಗಿ ಛಾಪು ಮೂಡಿಸಿದ್ದರೆ, ಕಿರಿಯ ಪುತ್ರ ಬೋಸ್ ಬಾಬು ಕೂಡ ಸಿನಿಮಾ ಕ್ಷೇತ್ರದಲ್ಲೇ ಸಕ್ರಿಯರಾಗಿದ್ದಾರೆ.