ಬೆಂಗಳೂರಿನ ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಸುಜಾ ಜಾರ್ಜ್ ಉದ್ಘಾಟನೆ | Suja George

Suja George inaugurates 3 renovated Anganwadis in Bengalurus Sarvagnanagar

ಬೆಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನವೀಕರಣಗೊಂಡ ಹತ್ತು ಅಂಗನವಾಡಿ ಕೇಂದ್ರ ಹಾಗೂ ಒಂದು ಶಾಲೆಯನ್ನು ಕೇಳಚಂದ್ರ ಪ್ರತಿಷ್ಠಾನದ ಟ್ರಸ್ಟಿ ಸುಜಾ ಜಾರ್ಜ್(Suja George) ಉದ್ಘಾಟಿಸಿದರು. ಆ ಮೂಲಕ ಮಕ್ಕಳ ದಿನಾಚರಣೆಯಂದೇ ಸುಜಾ ಜಾರ್ಜ್(Suja George) ಮಕ್ಕಳಿಗೆ ಬಿಗ್ ಗಿಫ್ಟ್ ನೀಡಿದರು.

ಜವಹರ ಲಾಲ್ ನೆಹರು ಜಯಂತಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಕೇಳಚಂದ್ರ ಪ್ರತಿಷ್ಠಾನದ ಟ್ರಸ್ಟಿ ಸುಜಾ ಜಾರ್ಜ್(Suja George) ಬಾಣಸವಾಡಿ ವಾರ್ಡ್‌ನ ದೊಡ್ಡ ಬಾಣಸವಾಡಿ ಅಂಗನವಾಡಿ ಕೇಂದ್ರ, ಕೆ.ಜಿ. ಹಳ್ಳಿ ಬ್ಲಾಕ್‌ನ ವಿನೋಬನಗರ ಅಂಗನವಾಡಿ ಕೇಂದ್ರ ಹಾಗೂ ಹೆಣ್ಣೂರು ಬ್ಲಾಕ್‌ನ ಕರಿಯಣ್ಣಪಾಳ್ಯ ಅಂಗನವಾಡಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆದು, ಮಾತುಕತೆ ನಡೆಸಿದರು. ಮಕ್ಕಳಿಗೆ ಸಿಹಿ ವಿತರಿಸಿ ಶುಭಾಶಯ ಕೋರಿದರು.

ಕೇಳಚಂದ್ರ ಪ್ರತಿಷ್ಠಾನ ಅಭಿವೃದ್ದಿಗೊಳಿಸಿದ 10 ಅಂಗನವಾಡಿ ಹಾಗೂ ಒಂದು ಶಾಲೆಯನ್ನು ಇಂದು ಉದ್ಘಾಟಿಸಲಾಯಿತು. ವಿಶೇಷವಾಗಿ ಕೆಪಿಟಿಸಿಎಲ್ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ವಿನಿಯೋಗಿಸಿ 32 ಅಂಗನವಾಡಿ ಹಾಗೂ ಶಾಲೆಗೆ ನವೀಕರಣ ನಡೆಸಲಾಗುತ್ತಿದೆ.

ಕೇಳಚಂದ್ರ ಪ್ರತಿಷ್ಠಾನದ ಟ್ರಸ್ಟಿ ಸುಜಾ ಜಾರ್ಜ್ ಮಾತನಾಡಿ,” ಬೆಂಗಳೂರು ನಗರದಲ್ಲಿ ಉದ್ಯೋಗ, ವ್ಯಾಪಾರ ಹಾಗೂ ದಿನಗೂಲಿ ಕೆಲಸಗಳಲ್ಲಿ ತೊಡಗಿರುವ ಸಾವಿರಾರು ಕುಟುಂಬಗಳಿಗೆ ಅಂಗನವಾಡಿಗಳು ಜೀವನದ ಪ್ರಮುಖ ಭಾಗವೇ ಆಗಿವೆ. ಪೋಷಕರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ, ಪೌಷ್ಟಿಕ ಆಹಾರ, ಆರಂಭಿಕ ಶಿಕ್ಷಣ ಉತ್ತಮ ಆರೈಕೆಯನ್ನು ಒದಗಿಸುವ ನೆಲೆಗಳಾಗಿವೆ,”ಎಂದು ತಿಳಿಸಿದರು.

“ಬಾಲ್ಯದಲ್ಲಿಯೇ ಮಕ್ಕಳಲ್ಲಿ ಕಲಿಕೆ, ಭಾಷಾ ಬೆಳವಣಿಗೆ, ಸೃಜನಶೀಲತೆ, ಕೌಶಲ್ಯ ಮತ್ತು ಉತ್ತಮ ಆರೋಗ್ಯದ ಅರಿವು ಮೂಡಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಮತ್ತು ದುಡಿಯುವ ವರ್ಗದ ಕುಟುಂಬಗಳ ಮಕ್ಕಳಿಗೆ ಸಮಾನ ಶಿಕ್ಷಣಾವಕಾಶ ಕಲ್ಪಿಸುವಲ್ಲಿ ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಅಂಗನವಾಡಿ ಕೇವಲ ಮಕ್ಕಳ ಆರೈಕೆ ಕೇಂದ್ರವಲ್ಲ. ಅದು ಆರೋಗ್ಯವಂತ, ಸುಶಿಕ್ಷಿತ ಮತ್ತು ಮುಂದಿನ ಪೀಳಿಗೆಯನ್ನು ಸಮರ್ಥವಾಗಿ ರೂಪಿಸುವ ಸಮಾಜದ ಅಡಿಪಾಯ ಆಗಿರಲಿವೆ,” ಎಂದು ಅಭಿಪ್ರಾಯಪಟ್ಟರು.

ಮಕ್ಕಳ ದಿನಾಚರಣೆಯ ಅಂಗವಾಗಿ ಲಿಂಗರಾಜಪುರಂನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 475 ಸ್ವೆಟರ್‌ಗಳನ್ನು ವಿತರಿಸಲಾಯಿತು. ಆರ್ಥಿಕ ನೆರವು ನಿಡಿದ ಲಿಂಗರಾಜಪುರಂ ವಾರ್ಡ್ ಅಧ್ಯಕ್ಷ ರವಿ ಪಟೇಲ್ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.

ಮಕ್ಕಳ ಕಲಿಕೆಗೆ ಪ್ರೇರಣೆ-ಅಂಗನವಾಡಿಗಳು

ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಸರ್ವಜ್ಞನಗರ ಕ್ಷೇತ್ರದ ಶಾಸಕರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ರಾಣಾ ಜಾರ್ಜ್‌ ನೇತೃತ್ವದಲ್ಲಿ ಸಮಗ್ರ ಅಭಿವೃದ್ದಿಯನ್ನು ಕೈಗೊಳ್ಳಲಾಗಿತ್ತು.

ಈ ಕೇಂದ್ರಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಬಣ್ಣದ ಕೆಲಸ, ವಿದ್ಯುತ್ ದುರಸ್ತಿ, ಹೊಸ ಫ್ಯಾನ್ ಮತ್ತು ಲೈಟ್‌ಗಳ ಅಳವಡಿಕೆ, ಗ್ರಿಲ್ ಹಾಗೂ ಗೇಟ್ ದುರಸ್ತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸುಧಾರಿಸಲಾಗಿದೆ. ವಿನೋಬನಗರ ಕೇಂದ್ರದಲ್ಲಿ 1,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಅಳವಡಿಸಲಾಗಿದ್ದು, ಕರಿಯಣ್ಣಪಾಳ್ಯ ಕೇಂದ್ರದಲ್ಲಿ ಶೌಚಾಲಯ, ಸ್ಟೋರ್ ರೂಂ ನವೀಕರಣ ಹಾಗೂ ಟೈಲ್ಸ್ ಅಳವಡಿಕೆ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ.

ಸರ್ವಜ್ಞನಗರದ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಪುಟ್ಟ ಮಕ್ಕಳಿಗೆ ಸ್ವಚ್ಛ, ಸುರಕ್ಷಿತ ಮತ್ತು ಆಕರ್ಷಕ ಕಲಿಕಾ ವಾತಾವರಣ ಒದಗಿಸುವ ಗುರಿ ಹೊಂದಿವೆ. ಮಕ್ಕಳ ಆರಂಭಿಕ ಶಿಕ್ಷಣ, ಆರೋಗ್ಯ ಮತ್ತು ಸಮಗ್ರ ಬೆಳವಣಿಗೆಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಷ್ಠಾನ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಅಂಗನವಾಡಿ ಕೇಂದ್ರಗಳ ಕಾರ್ಯಕ್ರಮಗಳಲ್ಲಿ ಎಂ.ಎಸ್. ನಗರ ಬ್ಲಾಕ್ ಅಧ್ಯಕ್ಷರಾದ ರಘು ದೇವರಾಜ್, ವಾರ್ಡ್ ಅಧ್ಯಕ್ಷರಾದ ರಂಗನಾಥ್, ಬಿಡಿಎ ಸದಸ್ಯರಾದ ಬಿ. ಎನ್. ಆರ್. ಅಮರನಾಥ್, ಎಂ.ಎಸ್. ನಗರ ಬ್ಲಾಕ್ ಮಹಿಳಾ ಅಧ್ಯಕ್ಷರಾದ ಸುಗುಣ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾದ ರೂಪಾ ಅವರು ಭಾಗವಹಿಸಿದ್ದರು.

ಕೆ.ಜಿ. ಹಳ್ಳಿ ಬ್ಲಾಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ಸುಮಿತ್ರಾ ಮುನಿಕೃಷ್ಣ, ವಾರ್ಡ್ ಅಧ್ಯಕ್ಷರಾದ ಕಿಶೋರ್ ಯಾದವ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ರಾಧಾ ಹಾಗೂ ಉಪಾಧ್ಯಕ್ಷರಾದ ನಾಜಿಯಾ ಉಪಸ್ಥಿತರಿದ್ದರು. ಹೆಣ್ಣೂರು ಬ್ಲಾಕ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಹೆಣ್ಣೂರು ಬ್ಲಾಕ್ ಅಧ್ಯಕ್ಷರಾದ ಎಚ್. ಎ. ಪುಲಿಕೇಶಿ, ಲಿಂಗರಾಜಪುರಂ ವಾರ್ಡ್ ಅಧ್ಯಕ್ಷರಾದ ಪಟೇಲ್ ರವಿಕುಮಾರ್, ಎಚ್‌ಬಿಆರ್ ವಾರ್ಡ್ ಅಧ್ಯಕ್ಷರಾದ ಸೈಯದ್ ಕಲೀಮುಲ್ಲಾ, ಕಮ್ಮನಹಳ್ಳಿ ವಾರ್ಡ್ ಅಧ್ಯಕ್ಷರಾದ ರಾಜಾ ದಕ್ಷಿಣಾಮೂರ್ತಿ, ಹೆಣ್ಣೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಫರ್ಜಾನಾ ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ನವೀನ್ ಕುಮಾರ್ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.