ಅಂತರ್ಜಾಲದಲ್ಲಿ ‘ಫುಲ್-ಟೈಮ್ ಟ್ರೇಡಿಂಗ್’ (Full-time Trading) ಮೂಲಕ ಸುಲಭವಾಗಿ ಹಣ ಗಳಿಸಬಹುದು ಎಂಬ ಮಾತುಗಳನ್ನು ನಂಬಿ, ಸೂಕ್ತ ಜ್ಞಾನವಿಲ್ಲದೆ ಟ್ರೇಡಿಂಗ್ ಹುಚ್ಚಿಗೆ(Trading Obsession) ಇಳಿದ ಎಂಜಿನಿಯರಿಂಗ್ ಪದವೀಧರನೊಬ್ಬ ಬರೋಬ್ಬರಿ 83 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ಬೀದಿಗೆ ಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಾಲದ ಸುಳಿಗೆ ಸಿಲುಕಿ ಮನೆ ಬಿಟ್ಟು ಓಡಿಹೋದ 35 ವರ್ಷದ ಈ ಯುವಕ, ಸದ್ಯ ಜೀವನ ನಿರ್ವಹಣೆಗಾಗಿ ಸ್ವಿಗ್ಗಿ (Swiggy) ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣ ‘ರೆಡಿಟ್’ (Reddit) ಪೋಸ್ಟ್ ಮೂಲಕ ವೈರಲ್ ಆಗಿದೆ.
ಸುಖೀ ಕುಟುಂಬವನ್ನು ಬೀದಿಗೆ ತಂದ ಟ್ರೇಡಿಂಗ್ ಗೀಳು
ರೆಡಿಟ್ ಬಳಕೆದಾರರೊಬ್ಬರು ತಮ್ಮ ಸೋದರ ಸಂಬಂಧಿಯ ದುರಂತ ಕಥೆಯನ್ನು ಹಂಚಿಕೊಂಡಿದ್ದು, ಹಣಕಾಸಿನ ಮಾರುಕಟ್ಟೆಯ ಅರಿವಿಲ್ಲದೆ ಹೂಡಿಕೆ ಮಾಡುವುದರಿಂದಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಪೋಸ್ಟ್ನಲ್ಲಿ ವಿವರಿಸಿರುವಂತೆ, ಆರ್ಥಿಕವಾಗಿ ಸ್ಥಿತಿವಂತ ಕುಟುಂಬದಿಂದ ಬಂದಿದ್ದ, ವಿವಾಹಿತನಾಗಿದ್ದ ಈ ಎಂಜಿನಿಯರ್ ಕೆಲವು ವರ್ಷಗಳ ಹಿಂದೆ ತನ್ನ ಕ್ಲೈಂಟ್ ಒಬ್ಬರ ಕಚೇರಿಗೆ ಭೇಟಿ ನೀಡಿದ್ದಾಗ ಟ್ರೇಡಿಂಗ್ ಬಗ್ಗೆ ತಿಳಿದುಕೊಂಡಿದ್ದ. ಕ್ಲೈಂಟ್ ಅದನ್ನೇ ಪೂರ್ಣಾವಧಿ ವೃತ್ತಿಯನ್ನಾಗಿಸಿಕೊಂಡಿದ್ದನ್ನು ಕಂಡು ಆಕರ್ಷಿತನಾದ ಯುವಕ, ಆರಂಭದಲ್ಲಿ ಸಣ್ಣ ಮೊತ್ತದೊಂದಿಗೆ ಟ್ರೇಡಿಂಗ್ ಶುರುಮಾಡಿದ್ದ.
ಜಮೀನು ಮಾರಿ, ಚಿನ್ನ ಅಡವಿಟ್ಟು ₹35 ಲಕ್ಷ ನೀಡಿದ್ದ ಪೋಷಕರು
ಆರಂಭಿಕ ದಿನಗಳಲ್ಲಿ ಅದೃಷ್ಟವಶಾತ್ ಸ್ವಲ್ಪ ಲಾಭ ಕಂಡಿದ್ದರಿಂದ ಮಗ ಸುಲಭವಾಗಿ ಹಣ ಗಳಿಸುತ್ತಿದ್ದಾನೆ ಎಂದು ನಂಬಿದ ಪೋಷಕರು, ಆತನಿಗೆ ಬೆಂಬಲವಾಗಿ ನಿಂತರು. ತಮ್ಮಲ್ಲಿದ್ದ ಜಮೀನನ್ನು ಮಾರಿ, ಚಿನ್ನಾಭರಣಗಳನ್ನು ಅಡವಿಟ್ಟು ಬರೋಬ್ಬರಿ 35 ಲಕ್ಷ ರೂಪಾಯಿಗಳನ್ನು ಹೊಂದಿಸಿ ಮಗನ ಕೈಗಿತ್ತಿದ್ದರು. ಆದರೆ, ಮಾರುಕಟ್ಟೆಯ ತಂತ್ರಗಾರಿಕೆ ತಿಳಿಯದ ಆತ ಹೂಡಿಕೆ ಮಾಡಿದ ಎಲ್ಲಾ ಹಣವನ್ನು ಕಳೆದುಕೊಂಡಿದ್ದ.
ಸಾಲದ ಆ್ಯಪ್, ಪತ್ನಿಯ ಒಡವೆಯೂ ಕರಗಿತು: ಒಟ್ಟು ₹83 ಲಕ್ಷ ಸಾಲ!
ಕಳೆದುಕೊಂಡ ಹಣವನ್ನು ಹೇಗಾದರೂ ಮಾಡಿ ಮರಳಿ ಗಳಿಸಬೇಕೆಂಬ ಹಠಕ್ಕೆ ಬಿದ್ದ ಯುವಕ, ಮತ್ತಷ್ಟು ಆಳವಾದ ಗುಂಡಿಗೆ ಬಿದ್ದಿದ್ದಾನೆ. ವಿವಿಧ ಲೋನ್ ಆ್ಯಪ್ಗಳ (Loan Apps) ಮೂಲಕ ಸಾಲ ಪಡೆದು ಹಾಗೂ ಪತ್ನಿಯ ಚಿನ್ನಾಭರಣಗಳನ್ನೂ ಅಡವಿಟ್ಟು ಟ್ರೇಡಿಂಗ್ ಮುಂದುವರಿಸಿದ್ದ. ಇದರಿಂದ ಮನೆಯಲ್ಲಿ ತೀವ್ರ ಕಲಹ ಶುರುವಾದಾಗ, ಆತನ ಸಹೋದರ ಮಧ್ಯಪ್ರವೇಶಿಸಿ ವಿಚಾರಿಸಿದಾಗ ಬರೋಬ್ಬರಿ 83 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿರುವ ಆಘಾತಕಾರಿ ಸತ್ಯ ಬಯಲಾಗಿದೆ. ಪೋಷಕರು ಆರ್ಥಿಕ ನೆರವು ನೀಡಿದರೂ ಸಾಲದ ಹೊರೆ ತಾಳಲಾರದೆ ಆತ ಮನೆ ಬಿಟ್ಟು ಓಡಿಹೋಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ವಿಗ್ಗಿ ಡೆಲಿವರಿ ರೈಡರ್ ಆಗಿ ಕೆಲಸ ಮಾಡುತ್ತಾ ಹೊಸ ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದಾನೆ.
ಸ್ಟ್ರಾಟಜಿ ಕೇಳಿ ದಂಗಾದ ಸಂಬಂಧಿ!
ಬಹಳ ವರ್ಷಗಳ ನಂತರ ಸ್ವಿಗ್ಗಿ ಸಮವಸ್ತ್ರದಲ್ಲಿದ್ದ ಸಂಬಂಧಿಯನ್ನು ಭೇಟಿಯಾದ ಬಳಕೆದಾರ, ಆತನ ಟ್ರೇಡಿಂಗ್ ತಂತ್ರಗಾರಿಕೆ (Strategy) ಏನಾಗಿತ್ತು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ನೀಡಿದ ಉತ್ತರ ಕೇಳಿ ಸಂಬಂಧಿ ದಂಗಾಗಿದ್ದಾರೆ. “ಟ್ರೇಡಿಂಗ್ ಚಾರ್ಟ್ನಲ್ಲಿ ಒಂದು ರೀತಿಯ ಕೆಂಪು ದೀಪ (Red light) ಅಥವಾ ಬ್ಲಿಂಕ್ ಕಾಣಿಸುತ್ತದೆ, ಆಗ ಹಣ ಹೂಡಿಕೆ ಮಾಡಬೇಕು ಅಷ್ಟೇ” ಎಂದು ಆತ ಮುಗ್ಧವಾಗಿ ಹೇಳಿದ್ದಾನಂತೆ!
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. “ನಾವು ಏನು ಮಾಡುತ್ತಿದ್ದೇವೆ ಎಂಬ ಸ್ಪಷ್ಟ ಅರಿವಿಲ್ಲದೆ ಟ್ರೇಡಿಂಗ್ಗೆ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆಯ ಗಂಟೆ” ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, “ನನಗೆ ಅತ್ಯಂತ ಆಪ್ತರಾಗಿದ್ದ ಒಬ್ಬರಿಗೂ ಇದೇ ರೀತಿ ಆಗಿತ್ತು. ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವ್ಯವಹಾರದಲ್ಲಿ ಅವರು 2 ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡರು” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ




