ಬೆಂಗಳೂರು: ರಾಜ್ಯ ಸರ್ಕಾರವು ವಿವಿಧ ನಿಗಮ ಮತ್ತು ಮಂಡಳಿಗಳಿಗೆ(Corporation and Board Members) ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದು, ಸರ್ಕಾರದಿಂದ ನಾಮನಿರ್ದೇಶನಗೊಂಡು 2 ವರ್ಷಗಳ ಅವಧಿ ಪೂರೈಸಿರುವ ಎಲ್ಲಾ ಸದಸ್ಯರು ಹಾಗೂ ನಿರ್ದೇಶಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಪದಮುಕ್ತಗೊಳಿಸಲು ಮುಖ್ಯಮಂತ್ರಿಗಳ ಸಚಿವಾಲಯದಿಂದ ಮಹತ್ವದ ಸೂಚನೆ ನೀಡಲಾಗಿದೆ. ಆ ಮೂಲಕ 2 ವರ್ಷ ಪೂರೈಸಿದ ನಿಗಮ-ಮಂಡಳಿ(Corporation and Board Members) ಸದಸ್ಯರಿಗೆ ಗೇಟ್ ಪಾಸ್ ನೀಡಲಾಗಿದೆ.
ಈ ಕುರಿತು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನವೆಂಬರ್ 16, 2026 ರಂದು ಅಧಿಕೃತ ಟಿಪ್ಪಣಿ (ಕ್ರಮಾಂಕ: ACSCM/T/3439/2026) ಹೊರಡಿಸಿದ್ದಾರೆ.
ಯಾರಿಗೆ ವಿನಾಯಿತಿ? ಯಾರಿಗೆ ಪದಮುಕ್ತಿ?
ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು (UDA) ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು (LPA) ಹೊರತುಪಡಿಸಿ, ಉಳಿದ ಎಲ್ಲಾ ನಿಗಮ ಮತ್ತು ಮಂಡಳಿಗಳಲ್ಲಿ 2 ವರ್ಷದ ಅಧಿಕಾರಾವಧಿ ಪೂರೈಸಿರುವ ನಾಮನಿರ್ದೇಶಿತ ಸದಸ್ಯರು ಮತ್ತು ನಿರ್ದೇಶಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ ಸೂಕ್ತ ಆದೇಶ ಹೊರಡಿಸುವಂತೆ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಹೊಸಬರ ನೇಮಕಾತಿ ವಿವರ ಸಲ್ಲಿಸಲು ಸೂಚನೆ:
ಹಳಬರನ್ನು ಪದಮುಕ್ತಗೊಳಿಸುವ ಪ್ರಕ್ರಿಯೆಯ ಜೊತೆಗೆ, ಈಗಾಗಲೇ ಮುಖ್ಯಮಂತ್ರಿಗಳು ಅನುಮೋದಿಸಿರುವ ನೂತನ ಸದಸ್ಯರು ಹಾಗೂ ನಿರ್ದೇಶಕರನ್ನು ಆಯಾ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಮಾಡಿರುವ ವಿವರಗಳನ್ನು ತಕ್ಷಣವೇ ಮುಖ್ಯಮಂತ್ರಿಗಳ ಅವಗಾಹನೆಗೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖಾ ಕಾರ್ಯದರ್ಶಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಕೋರಲಾಗಿದೆ.




