ದಾವಣಗೆರೆ: ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ, BJP ಮುಖಂಡ ಎನ್. ರವಿಕುಮಾರ್(BJP N Ravikumar) ಅವರು ಟೀಕಿಸಿದ್ದಾರೆ.
ಅವರು ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ವಿಧಾನಮಂಡಲದ ಅಧಿವೇಶನ ಡಿಸೆಂಬರ್ ಎರಡರಿಂದ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ಮೊನ್ನೆ ಭಾರತೀಯ ಜನತಾ ಪಾರ್ಟಿಯ ಪ್ರಮುಖರ ಸಭೆ ನಡೆಸಲಾಗಿದೆ. ಅಲ್ಲಿ ರಾಜ್ಯದ ಪ್ರಸಕ್ತ ಪರಿಸ್ಥಿತಿಯನ್ನು ನಾವು ಅವಲೋಕನ ಮಾಡಿದ್ದೇವೆ ಎಂದು ವಿವರಿಸಿದರು. ಬರಗಾಲದ ಪರಿಸ್ಥಿತಿ ಕುರಿತು ಈ ಸರ್ಕಾರಕ್ಕೆ ಅರಿವೇ ಇಲ್ಲದಂತಿದೆ ಎಂದು ಆಕ್ಷೇಪಿಸಿದರು.
ಒಣಗಿದ ಬೆಳೆ- ರೈತರ ಖಾತೆಗೆ ಹಣ ಹಾಕಿಲ್ಲ..
ಇಲ್ಲಿ ದೊಡ್ಡ ಕೆರೆ ಇದ್ದರೂ ತೋಟಗಳೆಲ್ಲ ಒಣಗಿ ಹೋಗುತ್ತಿವೆ. ಮಳೆ ಬಾರದೇ ಹೋದ್ರೆ ಶೇಕಡಾ 70 ರಿಂದ 80 ತೋಟಗಳು ಒಣಗಿ ಹೋಗುವುದಾಗಿ ರೈತರು ಹೇಳುತ್ತಾರೆ. ಹೀಗಿರುವಾಗ ರಾಜ್ಯದ ಬೇರೆಲ್ಲ ತಾಲೂಕುಗಳ ಪರಿಸ್ಥಿತಿ ಏನು ಎಂಬ ಅರಿವು ಸರ್ಕಾರಕ್ಕೆ ಇದೆಯೇ ಎಂದು ಕೇಳಿದರು. ಮಳೆಯೇ ಕಡಿಮೆ ಬರುವ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಳೆ ಸರಿಯಾಗಿ ಬಂದಿಲ್ಲ. ಆದರೂ ಈ ಸರ್ಕಾರ ಸೂಕ್ತ ಮುಂಜಾಗ್ರತೆ ವಹಿಸಲೇ ಇಲ್ಲ ಎಂದು ದೂರಿದರು.
ಒಂದೆಡೆ ಮಳೆ ಇಲ್ಲದೆ ಬೆಳೆ ಬಂದಿಲ್ಲ. ಎರಡೂವರೆ ಸಾವಿರ ರೂಪಾಯಿ ಹಾಕುವುದಾಗಿ ತಿಳಿಸಿದ್ದರು. ಬಳಿಕ ಅದನ್ನು ಐದು ಸಾವಿರ ರೂಪಾಯಿಗೆ ಹೆಚ್ಚಿಸಿದ್ದರು. ರೈತರ ಖಾತೆಗೆ ಇನ್ನೂ ಒಂದು ಸಾವಿರ ರೂಪಾಯಿನೂ ಹಾಕಿಲ್ಲ ಎಂದು ಆರೋಪಿಸಿದರು. ಯಾದಗಿರಿ ಜಿಲ್ಲೆಯಲ್ಲಿ ಅನೇಕರ ಖಾತೆಗೆ 700 ರೂಪಾಯಿ ಹಾಕಿದ್ದಾರೆ, 500 ರೂಪಾಯಿ ಹಾಕಿದ್ದಾರೆ. ಈ ಸರ್ಕಾರ ರೈತರನ್ನು ಭಿಕ್ಷಕರ ತರ ಕಾಣುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದೊಂದು ರೀತಿಯ ನಿರ್ಲಜ್ಜ ಸರ್ಕಾರ ಎಂದು ದೂರಿದರು.
ದನಕರುಗಳ, ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಏನು?
ಕುಡಿಯುವ ನೀರಿಲ್ಲ, ದನಕರುಗಳು ಸಾಯುತ್ತಿವೆ. ಮೇವಿಲ್ಲ. ಜನರು ಬದುಕುವುದಕ್ಕಾಗಿ ಉದ್ಯೋಗ ಸಿಗೋ ಕಡೆಗಳಲ್ಲಿ ಗುಳೆ ಹೋಗಬಹುದು. ದನಕರುಗಳ ಪರಿಸ್ಥಿತಿ ಏನು? ಪ್ರಾಣಿ ಪಕ್ಷಿಗಳ ಪರಿಸ್ಥಿತಿ ಏನು? ಅವುಗಳಿಗೆ ಈಗ ಉದಾಹರಣೆಗೆ ಸ್ವಲ್ಪ ನೀರಿನ ಶೇಖರಣೆ, ಮೇವಿನ ಸಂಗ್ರಹ ಒಂದು ಸ್ವಲ್ಪನೂ ಮಾಡಿಲ್ಲ. ಪರಿಹಾರವನ್ನೂ ಕೊಡಲಿಲ್ಲ. ಏನೇ ಹೇಳಿದ್ರೂ ಕೂಡ ನೇರವಾಗಿ ಕೇಂದ್ರಕ್ಕೆ ಹೊತ್ತು ಹಾಕುತ್ತ್ತಾರೆ. ಕೇಂದ್ರ ಮಾಡ್ಲಿ, ಹಂಗಾದ್ರೆ ನೀವು ಮಾಡಿ ಅಂತ ಕೇಳ್ತಾರೆ ನಾವು ಹೋರಾಟ ಮಾಡಿದರೆ ನೀವ್ಯಾಕೆ ಇರೋದು? ಎನ್ನುತ್ತಾರೆ. ಕೇಂದ್ರ ಸರ್ಕಾರ ಪರಿಸ್ಥಿತಿ ಭೀಕರವಾಗಿದ್ದರೆ ನೆರವಿಗೆ ಬಂದೇ ಬರುತ್ತದೆ ಎಂದರು.
ದ್ವಿಗುಣ ಮೊತ್ತ ಕೊಟ್ಟಿದ್ದ ಯಡಿಯೂರಪ್ಪನವರು..
ಯಡಿಯೂರಪ್ಪನವರು ಬರಗಾಲ ಬಂದಂತ ಸಂದರ್ಭದಲ್ಲಿ ಎರಡು ಪಟ್ಟು ಹಣ ನೀಡಿದೆ. ಎನ್‍ಡಿಆರ್‍ಎಫ್ ಪ್ರಕಾರ ಒಂದು ಹೆಕ್ಟೇರ್‍ಗೆ 6,500 ರೂಪಾಯಿ ಕೊಡುತ್ತಿತ್ತು. ನಮ್ಮ ರಾಜ್ಯ ಸರ್ಕಾರ ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ದ್ವಿಗುಣ ಮೊತ್ತವನ್ನು ನೀಡಿದ್ದರು ಎಂದು ಗಮನಕ್ಕೆ ತಂದರು. ಅಲ್ಲದೇ ಈ ಕುರಿತ ಅಂಕಿಅಂಶಗಳನ್ನೂ ನೀಡಿದರು. ಈ ಸರ್ಕಾರ ರೈತರನ್ನ ಸಂಪೂರ್ಣವಾಗಿ ಕಡೆಗಣಿಸಿದೆ. ಈ ವಿಷಯವನ್ನ ತೆಗೆದುಕೊಂಡು ಸದನದಲ್ಲಿ ನಾವು ಬಹಳ ದೊಡ್ಡ ಪ್ರತಿಭಟನೆಯನ್ನ ಮಾಡಲಿದ್ದೇವೆ. ಪರಿಹಾರಕ್ಕೆ ಆಗ್ರಹಿಸುತ್ತೇವೆ ಎಂದು ವಿವರಿಸಿದರು.
ಸರ್ಕಾರಕ್ಕೆ ನಾಚಿಕೆ ಆಗಬೇಕು…
ಈ ಸರ್ಕಾರ ಬಂದ ನಂತರ ಹಾಲಿಗೆ ಹದಿನೇಳು ರೂಪಾಯಿ ದರ ಹೆಚ್ಚಳ ಮಾಡಿದ್ದಾರೆ. ದೇಶದಲ್ಲೇ ಯಾವ ರಾಜ್ಯವೂ ಇμÉ್ಟೂಂದು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿಲ್ಲ. ಆದ್ದರಿಂದ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಕೇವಲ ಹಾಲು ಮಾತ್ರವಲ್ಲ ಮೊಸರು, ಮಜ್ಜಿಗೆ, ತುಪ್ಪ ಸೇರಿ ಐವತ್ತು ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಅಲ್ಲದೆ ಜನನ ಮತ್ತು ಮರಣ ಪ್ರಮಾಣ ಪತ್ರ, ಮುದ್ರಾಂಕ ಶುಲ್ಕವನ್ನೂ ದುಪ್ಪಟ್ಟು ಏರಿಸಲಾಗಿದೆ ಎಂದು ಟೀಕಿಸಿದರು.
ಎಲ್ಲ ಬೆಲೆ ದುಪ್ಪಟ್ಟು…
ದ್ವಿಚಕ್ರ ವಾಹನ, ಕಾರಿನ ತೆರಿಗೆಯನ್ನೂ ಏರಿಸಿದ್ದಾರೆ. ಆದರೆ ಏರಿಕೆಯಾದ ಹಣ ಎಲ್ಲಿ ಹೋಗಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸೋರಿಕೆ ತಡೆದರೆ ಸಾಕು ನಾವು ಬೆಲೆ ಏರಿಕೆ ಮಾಡದೇ ಗ್ಯಾರಂಟಿಗೆ ಹಣ ಕ್ರೋಡೀಕರಣ ಮಾಡಬಹುದು ಎಂದು ಆಗಿನ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಗ್ಯಾರಂಟಿಗಳನ್ನೂ ಸರಿಯಾಗಿ ಕೊಡುತ್ತಿಲ್ಲ ಎಂದು ದೂರಿದರು.
ಪರಿಷ್ಕರಣೆ ನೆಪದಲ್ಲಿ ಗ್ಯಾರಂಟಿ ಕಟ್…
ಗೃಹಲಕ್ಷ್ಮಿ ಹಣ ಸರಿಯಾಗಿ ನೀಡಿಲ್ಲ. ಬೆಲೆ ಏರಿಕೆ, ತೆರಿಗೆ ಹೆಚ್ಚಳ, ಗ್ಯಾರಂಟಿ ಜಾರಿ ವೈಫಲ್ಯವನ್ನೂ ಸದನದಲ್ಲಿ ಕೈಗೆತ್ತಿಕೊಳ್ಳುತ್ತೇವೆ. ಸರ್ಕಾರ ಹೇಳಿದ ಯುವನಿಧಿಯನ್ನೂ ಸರಿಯಾಗಿ ನೀಡುತ್ತಿಲ್ಲ. ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಗ್ಯಾರಂಟಿ ಪರಿಷ್ಕರಣೆ ನೆಪದಲ್ಲಿ ಸಾವಿರಾರು ಫಲಾನುಭವಿಗಳನ್ನು ಕೈ ಬಿಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಇದು ಖಾಲಿ ಜೇಬಿನ ಸರ್ಕಾರ…
ರಾಜ್ಯದ ಅನ್ನದಾತರು ಬರ ಪರಿಹಾರದ ಹಣ ಕೇಳಿದರೆ ಹಣ ಇಲ್ಲ ಎಂದು ಮುಖ್ಯಮಂತ್ರಿ ಜೇಬು ತೋರಿಸುತ್ತಾರೆ. ಇದು ಖಾಲಿ ಜೇಬಿನ ಸರ್ಕಾರ, ಪಾಪರ್ ಗವರ್ನಮೆಂಟ್, ದಿವಾಳಿ ಸರ್ಕಾರ. ಬಡವರು, ಅಲ್ಪಸಂಖ್ಯಾತರು, ವಿಧವೆಯರು, ವಿಶೇಷಚೇತನರು, ಯುವಕರ ನೆರವಿಗೆ ಸರ್ಕಾರ ಬರಬೇಕು. ಆದರೆ ಯಾವುದೇ ಮಾಸಾಶನÀಗಳನ್ನೂ ಸರಿಯಾಗಿ ನೀಡುತ್ತಿಲ್ಲ. ಸುಮಾರು 27 ಲಕ್ಷ ಜನರಿಗೆ ಮಾಸಾಶನಗಳನ್ನು ಏಳೆಂಟು ತಿಂಗಳಿಂದ ನಿಲ್ಲಿಸಲಾಗಿದೆ ಎಂದು ದೂರಿದರು.
ಉದ್ಯೋಗ ಖಾತ್ರಿ ಸರಿಯಾಗಿ ನಡೆಯುತ್ತಿಲ್ಲ..
ರಾಜ್ಯದಲ್ಲಿ ವಿಬಿಜಿ ರಾಮ್ ಜೀ ಯೋಜನೆಯೂ ಸರಿಯಾಗಿ ನಡೆಯುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಸರ್ಕಾರ ವಿಫಲವಾಗಿದೆ. ಭ್ರಷ್ಟ್ರಾಚಾರ ತುಂಬಿ ತುಳುಕುತ್ತಿದೆ. ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಜನರ ಸಮಸ್ಯೆ ಬಗ್ಗೆ ಚರ್ಚಿಸುವುದು ಬಿಟ್ಟು ಆರ್‍ಎಸ್‍ಎಸ್ ಬಗ್ಗೆಯೇ ಟೀಕೆ ಮಾಡುತ್ತಾರೆ. ಸ್ಟಿಂಗ್ ಆಪರೇಷನ್, ಫೋನ್ ಕದ್ದಾಲಿಕೆ ಹೀಗೆ ಬೇಡದ ವಿಷಯದ ಬಗ್ಗೆಯೇ ಚರ್ಚೆ ಮಾಡುತ್ತಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕಲ್ಲವೇ ಎಂದು ಕೇಳಿದರು.
ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿರುವ ಗೃಹ ಸಚಿವರು ತನಿಖೆ ಮಾಡಿಸಬೇಕು. ಯಾರು ಆರೋಪಿಗಳು ಎಂದು ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು. ಇದೇ 23ರಿಂದ 25ರವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.




