ಬೆಂಗಳೂರು: ಕೇಂದ್ರ ಸರ್ಕಾರದೊಂದಿಗೆ ಸಂಘರ್ಷವಿಲ್ಲ, ಆದರೆ ರಾಜ್ಯಕ್ಕೆ ಬರಬೇಕಾದ 2186.20 ಕೋಟಿ ರೂ.ಗಳ ನ್ಯಾಯಯುತ ಹಕ್ಕಿಗಾಗಿ ಸುಪ್ರೀಂಕೋರ್ಟ್ ಕದ ತಟ್ಟಲು ತೀರ್ಮಾನಿಸಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ(Minister Eshwar Khandre) ತಿಳಿಸಿದ್ದಾರೆ. ಆ ಮೂಲಕ ಸಚಿವ ಈಶ್ವರ್ ಖಂಡ್ರೆ(Minister Eshwar Khandre) ಕೇಂದ್ರದ ಜೊತೆಗೆ ಯಾವುದೇ ಸಂಘರ್ಷವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2025ರ ಡಿಸೆಂಬರ್ ನಿಂದ ನಿರಂತರವಾಗಿ ಹಲವು ಪತ್ರಗಳನ್ನು ಬರೆದಿದ್ದರೂ, ಸ್ವತಃ ಮುಖ್ಯಮಂತ್ರಿಗಳೇ ಕೇಂದ್ರಕ್ಕೆ ಮನವಿ ಮಾಡಿದ್ದರೂ ತಾಂತ್ರಿಕ ಲೋಪದ ಕಾರಣ ಒಡ್ಡಿ ಹಣ ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋರ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ಸಚಿವರಾದ ತರುವಾಯ ರಾಜ್ಯದ ಎಲ್ಲ ಸಂಸತ್ ಸದಸ್ಯರಿಗೂ ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಲು ಮನವಿ ಮಾಡಿದ್ದೇನೆ, ಜೊತೆಗೆ ಖುದ್ದು ಸಚಿವರಾದ ನಿರ್ಮಲಾ ಸೀತಾರಾಮನ್, ಲಲನ್ ಸಿಂಗ್, ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆದಾಗ್ಯೂ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಎಸ್.ಎಲ್.ಪಿ. ಸಲ್ಲಿಸಲು ಇಂದು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಿದ್ದು, ಮುಂದಿನ ವಾರದೊಳಗೆ ಅರ್ಜಿ ಸಲ್ಲಿಸಲಾಗುವುದು ಎಂದರು.
ನಿರಾಕರಣೆಗೆ ಕೇಂದ್ರ ನೀಡುವ ಕಾರಣ:
ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ಅನುದಾನ ಬಿಡುಗಡೆ ಮಾಡಿದ ಬಳಿಕ ರಾಜ್ಯ ಸರ್ಕಾರ 10 ದಿನಗಳ ಒಳಗಾಗಿ ಗ್ರಾ.ಪಂ.ಗೆ ಹಣ ಬಿಡುಗಡೆ ಮಾಡಬೇಕು. ಇಲ್ಲವೆ ಬಡ್ಡಿ ಸಹಿತ ಪಾವತಿಸಬೇಕು ಮತ್ತು ಸ್ವೀಕೃತಿ ವಿವರಗಳನ್ನು ಇ-ಗ್ರಾಮ ಸ್ವರಾಜ್ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು. 2024-25ರಲ್ಲಿ ಕೇಂದ್ರ ಸರ್ಕಾರ ರಾಜ್ಯದ ಗ್ರಾ.ಪಂ.ಗಳಿಗೆ ಬಿಡುಗಡೆ ಮಾಡಿದ್ದ 2133.25 ಕೋಟಿ ರೂ ಪೈಕಿ ಇ-ಗ್ರಾಮ್ ಸ್ವರಾಜ್ ಪೋರ್ಟಲ್ ನಲ್ಲಿ 1907 ಕೋಟಿ ಸ್ವೀಕೃತಿ ದಾಖಲಾಗಿದೆ. ವ್ಯತ್ಯಾಸ ಕೇವಲ 225 ಕೋಟಿ ರೂ. ಮಾತ್ರ. ಈ ಹಣವೂ ಭೌತಿಕವಾಗಿ ಗ್ರಾ.ಪಂ. ತಲುಪಿದೆ. ತಾಂತ್ರಿಕ ತೊಡಕಿನಿಂದ ಪೋರ್ಟಲ್ ನಲ್ಲಿ ಪ್ರತಿಬಿಂಬಿತವಾಗಿಲ್ಲ ಎಂದು ಹಣ ಬಿಡುಗಡೆ ಮಾಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಬೇರೆ ರಾಜ್ಯಕ್ಕೆ ವಿನಾಯಿತಿ, ಕರ್ನಾಟಕಕ್ಕೆ ಏಕೆ ಷರತ್ತು:
ಕೇಂದ್ರದ ಈ ಷರತ್ತು, ನಿರ್ಬಂಧಗಳನ್ನು ಕರ್ನಾಟಕ ಹಾಗೂ ಕೆಲವು ರಾಜ್ಯಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಆದರೆ, ಉತ್ತರ ಖಂಡಕ್ಕೆ 470 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ ಸ್ವೀಕೃತಿ ಸಂಪೂರ್ಣ ಶೂನ್ಯವಾಗಿದೆ. ಆದರೂ ಅವರಿಗೆ 2025-26ನೇ ಸಾಲಿನಲ್ಲಿ ಪೂರ್ತಿ ಅನುದಾನ ಬಿಡುಗಡೆ ಮಾಡಿದ್ದಾರೆ.
ಗುಜರಾತ್ ರಾಜ್ಯಕ್ಕೆ ಕೂಡ 2619 ಕೋಟಿ ಬಿಡುಗಡೆ ಮಾಡಿದ್ದಾರೆ. ಪೋರ್ಟಲ್ ನಲ್ಲಿ 2104 ಕೋಟಿ ಸ್ವೀಕೃತಿ ಆಗಿದೆ. ವ್ಯತ್ಯಾಸ 515 ಕೋಟಿ ಇದೆ. ಅಸ್ಸಾಂ ರಾಜ್ಯಕ್ಕೆ 1315 ಕೋಟಿ ರೂ. ಬಿಡುಗಡೆ ಆಗಿದೆ. ಪೋರ್ಟಲ್ ನಲ್ಲಿ 447 ಕೋಟಿ ರೂ. ಸ್ವೀಕೃತಿ ಇದೆ. ವ್ಯತ್ಯಾಸ 867 ಕೋಟಿ ರೂ. ಇದೆ. ಇನ್ನು ಬಿಹಾರ ರಾಜ್ಯಕ್ಕೆ 4109 ಕೋಟಿ ರೂ.ಅನುದಾನ ಬಿಡುಗಡೆ ಆಗಿದೆ. ಅವರ ಸ್ವೀಕೃತಿ 1775 ಕೋಟಿ ರೂ. ಮಾತ್ರ. ವ್ಯತ್ಯಾಸ 2334 ಕೋಟಿ ರೂ. ಇದೆ. ಹೀಗಿದ್ದೂ ಈ ಎಲ್ಲ ರಾಜ್ಯಗಳಿಗೆ ಪೂರ್ಣ ಅನುದಾನ ನೀಡಿದ್ದಾರೆ. ಕರ್ನಾಟಕಕ್ಕೆ ಏಕೆ ನೀಡುತ್ತಿಲ್ಲ. ಇದು ಒಂದು ಕಣ್ಣಿಗೆ ಸುಣ್ಣ ಮತ್ತು ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಆಗಿದೆ ಎಂದು ಹೇಳಿದರು.
ಹಿಂದೆ ಸುಪ್ರೀಂಕೋರ್ಟ್ ಈ ರೀತಿ ರಾಜ್ಯ ಮತ್ತು ಕೇಂದ್ರ ಸಂಘರ್ಷ ಮಾಡಿಕೊಳ್ಳುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ನಾವು ಕೇಂದ್ರದೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳಲು ಮನವಿ ಮಾಡಿದರೂ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರುತ್ತಿದ್ದೇವೆ ಎಂದು ಈಶ್ವರ ಖಂಡ್ರೆ ತಿಳಿಸಿದರು.




