ಡಿಸೆಂಬರ್ ಒಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಈಶ್ವರ್ ಖಂಡ್ರೆ | E-Swathu

E-Swathu for 8 lakh Gramathana properties by December Minister Eshwar Khandre

ಬೆಂಗಳೂರು: ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು(E-Swathu) ನೀಡಿಕೆಯಲ್ಲಿನ ವಿಳಂಬ ನಿವಾರಣೆಗೆ ನಿಯಮಗಳ ತಿದ್ದುಪಡಿ ಮಾಡಲಾಗಿದ್ದು, ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು(E-Swathu) ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ(Minister Eshwar Khandre) ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1,50,69,090 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂಲೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಾಗಿದ್ದು, ವ್ಯಾಜ್ಯ ರಹಿತ, ಸರ್ಕಾರಿ, ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ ಮುಂದಿನ ವರ್ಷಾಂತ್ಯದೊಳಗೆ ಅಂದರೆ 2027ರ ಡಿಸೆಂಬರ್ 31ರ ಒಳಗಾಗಿ ಇ-ಸ್ವತ್ತು ನೀಡಲು 5927 ಗ್ರಾಮ ಪಂಚಾಯತಿಗಳಿಗೂ ಗುರಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಭೂಗ್ಯಾರಂಟಿ – ಇಸ್ವತ್ತು ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದು 6ನೇ ಗ್ಯಾರಂಟಿಯಾಗಿದೆ ಎಂದರು.

ರಾಜ್ಯದಲ್ಲಿ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ತಾವು ಸಚಿವರಾದ ಬಳಿಕ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಬೆಂಗಳೂರು ನಗರ, ಮಂಗಳೂರು,  ಕಲ್ಬುರ್ಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಗಳ ಸಿಇಓಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಿ, ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆಗಳನ್ನು ವಿತರಿಸಲು ಭೂ-ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮಠಾಣ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಕಂದಾಯ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಪರಿವರ್ತನೆ ಆದ ಭೂಮಿ ಮತ್ತು ಪರಿವರ್ತನೆ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಬಿ ಖರಾಬು ಭೂಮಿ ಇಲ್ಲದ ಸರ್ವೆ ನಂಬರ್ ಸ್ವತ್ತುಗಳಿಗೂ ಇ-ಸ್ವತ್ತು ನೀಡಲಾಗುವುದು. ನಂತರ ಭೂಪರಿವರ್ತನೆ ಆಗದ ಭೂಮಿಯ ಸ್ವತ್ತಿಗೂ ಇ-ಸ್ವತ್ತು ನೀಡಲು ಕೆಲವೇ ತಿಂಗಳುಗಳಲ್ಲಿ ನಿಯಮಗಳಿಗೆ ಮಾರ್ಪಾಡು ಮಾಡಿ, ಕ್ರಮ ವಹಿಸಲಾಗುವುದು ಎಂದರು.

ಹಲವರು ತಲೆಮಾರುಗಳಿಂದ, ದಶಕಗಳಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ತಮ್ಮ ಆಸ್ತಿಯಲ್ಲೇ ವಾಸಿಸುತ್ತಿದ್ದಾರೆ. ಆದರೆ ಇವರ ಆಸ್ತಿಯ ದಾಖಲೆಗಳು ಪ್ರವಾಹ, ಮಳೆ, ಬೆಂಕಿ ಅನಾಹುತದಲ್ಲಿ ಹಾಳಾಗಿದ್ದರೆ, ಮತ್ತೆ ಕೆಲವರ ಆಸ್ತಿ ದಾಖಲೆ ಗೆದ್ದಲು ತಿಂದು ಹೋಗಿದೆ.  ದಾಖಲೆಗಳು ಲಭ್ಯವಿಲ್ಲದವರಿಗೆ  07.04.2025 ರ ಪೂರ್ವದಲ್ಲಿನ ವಿದ್ಯುತ್‌ ಬಿಲ್ ಆಧಾರದ ಮೇಲೆ ಮತ್ತು ಸ್ಥಳ ಮಹಜರು ಮಾಡಿ, ಆಕ್ಷೇಪಣೆ ಸಲ್ಲಿಸಲು 21 ದಿನ ಅವಕಾಶ ನೀಡಿ ನಂತರ ಇ-ಸ್ವತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಕಣಮನೆ, ಮನದಳ ಆಸ್ತಿಗೂ ಇಸ್ವತ್ತು:

ಮಲೆನಾಡು ಭಾಗದ ಜನರ ವಾಸಸ್ಥಳಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಕಣ ಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ, ನಿಯಮಾನುಸಾರ ಇ-ಸ್ವತ್ತು ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. 4000 ಚದರಡಿಯವರೆಗಿನ ಸ್ವತ್ತಿಗೆ ಈ ಸೌಲಭ್ಯ ಲಭಿಸಲಿದೆ ಎಂದರು.

ಇ-ಸ್ವತ್ತು 3.0 ತಂತ್ರಾಂಶ ಶೀಘ್ರ:

ಇ-ಸ್ವತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಇ-ಸ್ವತ್ತು 2.0 ತಂತ್ರಾಂಶ ಜಾರಿಯಲ್ಲಿದೆ. ಆದರೆ ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಸುರಕ್ಷಿತಗೊಳಿಸಲು ಮತ್ತು ಸರ್ಕಾರಿ ಆಸ್ತಿಗೆ, ಬಿ ಖರಾಬು ಭೂಮಿಗೆ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುವಂತೆ ಇ-ಸ್ವತ್ತು 03 ತಂತ್ರಾಂಶ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿನ ಜಮೀನುಗಳ ಅಳತೆ ಅಂದರೆ ಸರ್ವೆಯಲ್ಲಿಯೂ ಸಮಸ್ಯೆ ಇದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸಲು ಮತ್ತು ಸಿಬ್ಬಂದಿಗೆ ತರಬೇತಿ ನೀಡಿ ರೋವರ್ ಗಳ ಮೂಲಕ ಸರ್ವೆ ಮಾಡಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಇದನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಈಶ್ವರ ಖಂಡ್ರೆ ತಿಳಿಸಿದರು.

ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ತೊಡಕಾದರೆ ಅವರು  ಸಹಾಯವಾಣಿ 9483476000 ನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದರು.

ಅಧಿಕಾರಿ ಸಿಬ್ಬಂದಿಗೆ ಸೂಚನೆ:

ರಾಜ್ಯ ಸರ್ಕಾರ ಗ್ರಾಮೀಣ ಜನರಿಗೆ ಅವರ ಆಸ್ತಿಯ ಹಕ್ಕು ಕೊಡಿಸಲು ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದ್ದು, ಜನರಿಗೆ ಸಮಸ್ಯೆ ಆಗದಂತೆ ಮತ್ತು ಸರ್ಕಾರಿ ಆಸ್ತಿಯ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕತೆ, ದಕ್ಷತೆ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ,  ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಡಿ. ರಂದೀಪ್, ಆಯುಕ್ತರಾದ ವೆಂಕಟರಾಜಾ, ಬೆಳಗಾವಿ ಸಿಇಓ ರಾಹುಲ್ ಶಿಂಧೆ ಮತ್ತು ಇ-ಆಡಳಿತ ನಿರ್ದೇಶಕರಾದ ಗಿರೀಶ್ ದಿಲೀಪ್ ಬದೋಲೆ ಮತ್ತಿತರರು ಪಾಲ್ಗೊಂಡಿದ್ದರು.