ಇಂಟೆಲ್ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್: ಮತ್ತೊಂದು ಸುತ್ತಿನ ಉದ್ಯೋಗ ಕಡಿತ | Intel lays off

Shocking news for Intel employees Another round of job cuts

ನವದೆಹಲಿ: ಅಮೆರಿಕದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಇಂಟೆಲ್ (Intel) ತನ್ನ ಪುನಾರಚನೆ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯ ಸಿಇಒ ಲಿಪ್-ಬು ಟ್ಯಾನ್ (Lip-Bu Tan) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವೆಚ್ಚ ಕಡಿತದ ಕ್ರಮದಿಂದಾಗಿ ಜಾಗತಿಕ ಐಟಿ (IT) ವಿಭಾಗದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆ ಮೂಲಕ ಇಂಟೆಲ್ ಉದ್ಯೋಗ ಕಡಿತಕ್ಕೆ(Intel lays off) ಮತ್ತೊಂದು ಸುತ್ತಿನಲ್ಲಿ ಮುಂದಾಗಿದೆ.

ಈ ವಾರ ಉದ್ಯೋಗ ಕಳೆದುಕೊಂಡ ಹಲವು ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ, ಈ ಬಾರಿ ಎಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಮತ್ತು ಯಾವ ನಿರ್ದಿಷ್ಟ ತಂಡಗಳ ಮೇಲೆ ಇದರ ಪರಿಣಾಮ ಬೀರಿದೆ ಎಂಬ ನಿಖರ ಅಂಕಿಅಂಶಗಳನ್ನು ಕಂಪನಿ ಬಹಿರಂಗಪಡಿಸಿಲ್ಲ ಎಂದು ‘ಬ್ಯುಸಿನೆಸ್ ಇನ್‌ಸೈಡರ್’ ವರದಿ ಮಾಡಿದೆ.

ಕಂಪನಿಯ ಸ್ಪಷ್ಟನೆ ಏನು?

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಇಂಟೆಲ್ ವಕ್ತಾರರು, ಕಂಪನಿಯನ್ನು ಇನ್ನಷ್ಟು ದಕ್ಷ ಹಾಗೂ ಚುರುಕಾಗಿ ಮುನ್ನಡೆಸುವ ವಿಶಾಲ ಕಾರ್ಯತಂತ್ರದ ಭಾಗವಾಗಿ ನಿಯಮಿತವಾಗಿ ಉದ್ಯೋಗಿಗಳ ಮೌಲ್ಯಮಾಪನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಂಪನಿಯ ಆದ್ಯತೆಗಳು ಮತ್ತು ಸಂಪನ್ಮೂಲಗಳು ಸರಿಯಾದ ದಿಕ್ಕಿನಲ್ಲಿ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಪುನಶ್ಚೇತನದ ಹಾದಿಯಲ್ಲಿ ಸತತ ಕಡಿತ

ಚಿಪ್ ತಯಾರಿಕೆಯಲ್ಲಿನ ಹಿನ್ನಡೆ ಮತ್ತು ಕೃತಕ ಬುದ್ಧಿಮತ್ತೆ (AI) ಚಿಪ್ ಮಾರುಕಟ್ಟೆಯಲ್ಲಿ ಪಾಲು ಕಳೆದುಕೊಂಡ ಬಳಿಕ, ಇಂಟೆಲ್ ತನ್ನ ವ್ಯವಹಾರವನ್ನು ಪುನಶ್ಚೇತನಗೊಳಿಸಲು ಹೆಣಗಾಡುತ್ತಿದೆ. ಇದರ ಭಾಗವಾಗಿ ಹಲವು ಯೋಜನೆಗಳನ್ನು ಸ್ಥಗಿತಗೊಳಿಸಿ, ಈ ವರ್ಷವೂ ಹಲವು ಸಣ್ಣ ಹಂತಗಳಲ್ಲಿ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ.

ಕಳೆದ ಎರಡು ವರ್ಷಗಳ ಉದ್ಯೋಗ ಕಡಿತದ ಹಿನ್ನೆಲೆ

ಇಂಟೆಲ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಉದ್ಯೋಗ ಕಡಿತ ನಡೆಯುತ್ತಿದೆ. 2026ರ ಜುಲೈನಲ್ಲಿ ಕಂಪನಿಯ ದೀರ್ಘಕಾಲೀನ ಆದ್ಯತೆಗಳಿಗೆ ತಕ್ಕಂತೆ ಕಾರ್ಯಪಡೆಯನ್ನು ಹೊಂದಿಸುವ ಉದ್ದೇಶದಿಂದ ತನ್ನ ‘ಡೇಟಾ ಸೆಂಟರ್ ಗ್ರೂಪ್’ (DCG) ವಿಭಾಗದಲ್ಲಿ ಉದ್ಯೋಗ ಕಡಿತ ಮಾಡಿರುವುದಾಗಿ ಇಂಟೆಲ್ ದೃಢಪಡಿಸಿತ್ತು. ಇದಕ್ಕೂ ಮುನ್ನ, 2025ರ ಜುಲೈನಲ್ಲಿ ಸಿಇಒ ಟ್ಯಾನ್ ಅವರು ಪುನಾರಚನೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದಾಗ, ಸುಮಾರು 24,000 ಉದ್ಯೋಗಗಳನ್ನು ಕಡಿತಗೊಳಿಸುವ ಮತ್ತು ಪ್ರಮುಖ ಯೋಜನೆಗಳನ್ನು ಹಿಂಪಡೆಯುವ ಬೃಹತ್ ಯೋಜನೆಯನ್ನು ಕಂಪನಿ ಪ್ರಕಟಿಸಿತ್ತು. ಇದೇ ಅವಧಿಯಲ್ಲಿ ಅಮೆರಿಕದಾದ್ಯಂತ 5,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಇದರಲ್ಲಿ ಒರೆಗಾನ್ ಮತ್ತು ಕ್ಯಾಲಿಫೋರ್ನಿಯಾ ಪ್ರಾಂತ್ಯಗಳ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.