ಸೆ. 27 ಭಾನುವಾರವೂ ಸಾರ್ವಜನಿಕ ವಲಯದ ಬ್ಯಾಂಕ್‌, ಆರ್‌ಆರ್‌ಬಿಗಳು ಕಾರ್ಯನಿರ್ವಹಣೆ

ನವದೆಹಲಿ: ಸೆ. 28ರಿಂದ 30ರವರೆಗೆ ಪ್ರಸ್ತಾವಿತ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (RRBs) ಸೆ. 27ರ ಭಾನುವಾರವೂ ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ.

ಸೆ. 26 ಮತ್ತು 27ರಂದು ವಾರಾಂತ್ಯದ ರಜೆಗಳಿದ್ದು, ಇದರ ಬೆನ್ನಲ್ಲೇ ಬ್ಯಾಂಕ್ ಮುಷ್ಕರ ನಡೆಯಲಿರುವುದರಿಂದ ಗ್ರಾಹಕರಿಗೆ ಸತತವಾಗಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಸೆ. 27ರಂದು ಎಲ್ಲ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂಗೆ ಸಂಬಂಧಿಸಿದ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್‌ಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿ ನೀಡಿದೆ.

ಈ ವ್ಯವಸ್ಥೆಯಿಂದ ಅಗತ್ಯ ಬ್ಯಾಂಕಿಂಗ್ ಸೇವೆಗಳು ನಿರಂತರವಾಗಿ ಲಭ್ಯವಾಗಲಿದ್ದು, ಮುಷ್ಕರದಿಂದ ಗ್ರಾಹಕರಿಗೆ ಉಂಟಾಗಬಹುದಾದ ತೊಂದರೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಮುಷ್ಕರ ಮುಂದೂಡಲು ಮನವಿ

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆ. 28ರಿಂದ 30ರವರೆಗೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಮುಷ್ಕರವನ್ನು ಮುಂದೂಡುವಂತೆ ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳು ಕಾರ್ಮಿಕ ಸಂಘಟನೆಗಳಿಗೆ ಮನವಿ ಮಾಡಿವೆ. ಇದೇ ವೇಳೆ ಅಗತ್ಯ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯಗೊಳ್ಳದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗ್ರಾಹಕರ ಹಿತಾಸಕ್ತಿ ಮತ್ತು ಅನುಕೂಲಕ್ಕೆ ಆದ್ಯತೆ ನೀಡಲಾಗಿದ್ದು, ಬ್ಯಾಂಕ್ ಸೇವೆಗಳಲ್ಲಿ ಉಂಟಾಗಬಹುದಾದ ಅಡಚಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸೆ. 27ರಂದು ವಿಶೇಷವಾಗಿ ಬ್ಯಾಂಕ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.