ಬೆಂಗಳೂರು: ಟೌನ್ ಶಿಪ್ ನೆಪದಲ್ಲಿ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಜೆಡಿಎಸ್ ಪಕ್ಷವು ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿತು.
ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್ಎಂ ರಮೇಶ್ ಗೌಡ ಅವರ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾದ ಪಕ್ಷದ ನಿಯೋಗವು, ಬಿಡದಿ ಭಾಗದಲ್ಲಿ ನೀರಾವರಿ ಮತ್ತು ಕೃಷಿಯೋಗ್ಯ ಫಲವತ್ತಾದ ಭೂಮಿ ಇದ್ದು ಅದನ್ನು ರಿಯಲ್ ಎಸ್ಟೇಟ್ ಉದ್ದೇಶದ ಟೌನ್ಷಿಪ್ ಯೋಜನೆಗೆ ಕಸಿದುಕೊಳ್ಳುವುದು ಅಕ್ಷ್ಯಮ್ಯ ಎಂದು ಮುಖ್ಯ ಕಾರ್ಯದರ್ಶಿಗೆ ದೂರಿತು.
ಈಗಾಗಲೇ ಮೊದಲ ಹಂತದ ಭೂಸ್ವಾದಿನದ ನೋಟಿಫಿಕೇಶನ್ ಹೊರಟಿಸಿರುವ ರಾಜ್ಯ ಸರ್ಕಾರವು ಸಂಪೂರ್ಣವಾಗಿ ರೈತ ವಿರೋಧಿ ನಿಲುವು ತಳೆದಿದ್ದು, ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ಸರ್ಕಾರದ ನಿಲುವು ಹಾಗೂ ಭೂಸ್ವಾಧೀನ ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದೇವೆ ಎಂದು ಹೆಚ್.ಎಂ. ರಮೇಶ್ ಗೌಡ ಅವರು ಮಾಧ್ಯಮಗಳಿಗೆ ತಿಳಿಸಿದರು.
ಮೊದಲ ಹಂತದಲ್ಲಿ ಸುಮಾರು 498 ಎಕರೆಗೂ ಹೆಚ್ಚು ಫಲವತ್ತಾದ ಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ. ಇದರಿಂದ ಸುಮಾರು 750 ಕುಟುಂಬಗಳು ಬೀದಿಪಾಲಾಗುತ್ತಿವೆ. ಈ ಪೈಕಿ 614 ಅಂದರೆ 81% ರೈತರು ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರು ಆಗಿದ್ದಾರೆ. ಒಪ್ಪತ್ತಿನ ಊಟಕ್ಕಾಗಿ ಕಷ್ಟಪಡುತ್ತಿರುವ ಶ್ರಮಜೀವಿಗಳು ಅವರಾಗಿದ್ದಾರೆ. ಅರ್ಧ ಎಕರೆ, ಕಾಲು ಎಕರೆ ಭೂಮಿ ಹೊಂದಿರುವ ಅವರು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅಂತಹ ರೈತರನ್ನು ಒಕ್ಕಲಿಸುವುದು ಅಮಾನವೀಯ ಎಂದು ರಮೇಶಗೌಡರು ಕಿಡಿಕಾರಿದರು.
ಇದಲ್ಲದೆ ಮುಂದಿನ ತಿಂಗಳು ಸುಮಾರು 7481ರಿಂದ 9,600 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ರೈತರು ಭೂಮಿ ಕೊಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಸರ್ಕಾರವೇ ಕೋರ್ಟ್ ನಲ್ಲಿ ಪರಿಹಾರ ಹಣವನ್ನು ಜಮೆ ಮಾಡಿ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ರೈತರು ಭೂಮಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಭೂಮಿಯನ್ನು ಕಸಿದುಕೊಳ್ಳುತ್ತಿರುವ ಭಾಗವು ಹೈನುಗಾರಿಕೆಯ ಸಮೃದ್ಧ ಜಾಗವಾಗಿದ್ದು, ಮಾಸಿಕ ಸುಮಾರು 6 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಪೂರೈಕೆ ಮಾಡುತ್ತಿದೆ. ಭೂಮಿ ರಿಯಲ್ ಎಸ್ಟೇಟ್ ಕುಳಗಳ ಪಾಲಾದರೆ ಅಷ್ಟೂ ಹಾಲಿನ ಉತ್ಪಾದನೆ ನಿಂತು ಹೋಗಲಿದೆ ಎಂದು ರಮೇಶಗೌಡರು ಕಳವಳ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ಪಶ್ಚಿಮ ಜಿಲ್ಲಾಧ್ಯಕ್ಷ ಟಿ.ತಿಮ್ಮೇಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹೆಚ್.ಸಿ.ಕೃಷ್ಣ, ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ನಟರಾಜ್ ಗಂಗಾಧರ್ ಹಾಗೂ ಗ್ರೇಟರ್ ಬೆಂಗಳೂರು ಮಹಾಪ್ರಧಾನ ಕಾರ್ಯದರ್ಶಿ ಎಸ್.ರಮೇಶ ಮುಂತಾದವರು ಇದ್ದರು.




