ಆಗಸ್ಟ್.2ರಂದು ಸಿವಿಲ್ ಪೊಲೀಸ್ ಪರೀಕ್ಷೆ: ಕಲ್ಯಾಣ ಅಭ್ಯರ್ಥಿಗಳ ಸಮಯ ಬದಲು

ಬೆಂಗಳೂರು: ಕಲ್ಯಾಣ ಕರ್ನಾಟಕ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಆಗಸ್ಟ್ 2ರಂದು ನಡೆಯುವ ಲಿಖಿತ ಪರೀಕ್ಷೆಯ ಸಮಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬದಲಾವಣೆ ಮಾಡಿದೆ.

ಈ ಮೊದಲು ನಿರ್ಧರಿಸಿದಂತೆ ಮಧ್ಯಾಹ್ನ 2.30ರ ಬದಲಿಗೆ ಸಂಜೆ 4 ಗಂಟೆಗೆ ಪರೀಕ್ಷೆ ಆರಂಭವಾಗಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಕೆಲ ಅಭ್ಯರ್ಥಿಗಳು, ಮಧ್ಯಾಹ್ನದ ಪರೀಕ್ಷಾ ಕೇಂದ್ರಗಳು ಬೆಳಗಿನ ಪರೀಕ್ಷಾ ಕೇಂದ್ರದಿಂದ ದೂರ ಇದ್ದು ತೆರಳುವುದಕ್ಕೆ ಕಷ್ಟ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸಮಯ ಬದಲಾವಣೆ ಮಾಡಿದ್ದು ಸಂಜೆ 4ರಿಂದ 5.30ರವರೆಗೆ ಪರೀಕ್ಷೆ ನಡೆಯಲಿದೆ.
ಉಳಿದಂತೆ ಬೆಳಗಿನ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ.

ರಾಯಚೂರು, ಕೊಪ್ಪಳ: ಹೊಸದಾಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಲಹೆ

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಎಲ್ಲ ಅಭ್ಯರ್ಥಿಗಳು ಹೊಸದಾಗಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಕೋರಲಾಗಿದೆ.

ಈ ಹಿಂದೆ ಡೌನ್‌ಲೋಡ್ ಮಾಡಿಕೊಂಡಿರುವವರು ಕೂಡ ಹೊಸದಾಗಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.