ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಸಿಜೆಪಿ: ನಾಳೆ ದೇಶಾದ್ಯಂತ NEET-UG ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆಗೆ ಕರೆ

ನವದೆಹಲಿ: NEET-UG ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಜುಲೈ 24ರ ಶುಕ್ರವಾರ ದೇಶಾದ್ಯಂತ ಬೃಹತ್ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ನಿಯಂತ್ರಣ ಕುರಿತು ಕೇಂದ್ರ ಸರ್ಕಾರವು ನಿರಂತರ ಭರವಸೆ ಹಾಗೂ ಸುದೀರ್ಘ ಚರ್ಚೆಗೆ ಆಹ್ವಾನ ನೀಡುತ್ತಿದ್ದರೂ, ಅದಕ್ಕೆ ಸೊಪ್ಪು ಹಾಕದ ಸಿಜಿಪಿ ತನ್ನ ಹೋರಾಟವನ್ನು ದೇಶಾದ್ಯಂತ ವಿಸ್ತರಿಸಲು ಮುಂದಾಗಿದೆ.

ಪೋಲಿಸ್ ದೌರ್ಜನ್ಯ ಖಂಡಿಸಿ ದೇಶಾದ್ಯಂತ ಒಗ್ಗಟ್ಟು

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಬಲಪ್ರಯೋಗವನ್ನು ಖಂಡಿಸಿ ಹಾಗೂ ದೇಶಾದ್ಯಂತ ಪೋಲಿಸ್ ದೌರ್ಜನ್ಯಕ್ಕೆ ಒಳಗಾದವರ ಬೆಂಬಲಕ್ಕೆ ನಿಲ್ಲಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು CJP ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಯುವ ಪಡೆಗಳು ಒಂದಾಗಿ, ಈ ಪ್ರತಿಭಟನೆಯ ಸಿದ್ಧತೆ ಮತ್ತು ಅನುಮತಿಗಳನ್ನು ಜಂಟಿಯಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದೆ.

ಶಾಂತಿಯುತ ಪ್ರತಿಭಟನೆಗೆ ಕಟ್ಟುನಿಟ್ಟಿನ ಕರೆ

ಸಾರ್ವಜನಿಕರ ಸಮಾವೇಶಗಳಲ್ಲಿ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳನ್ನು ಗಟ್ಟಿಯಾಗಿ ವಾಚಿಸಬೇಕು ಹಾಗೂ ‘ಇಂಕ್ವಿಲಾಬ್ ಜಿಂದಾಬಾದ್, ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಬೇಕು ಎಂದು ಸಂಘಟನೆ ವಿನಂತಿಸಿದೆ. ಅದೇ ಸಮಯದಲ್ಲಿ, ಯಾವುದೇ ಪರಿಸ್ಥಿತಿಯಲ್ಲೂ ಹಿಂಸಾಚಾರಕ್ಕೆ ಆಸ್ಪದ ನೀಡಬಾರದು ಎಂದು ಪ್ರತಿಭಟನಾಕಾರರಿಗೆ ಸೂಚಿಸಿದೆ.

“ಜೈ ಹಿಂದ್, ಭಾರತ್ ಮಾತಾ ಕಿ ಜೈ, ಇಂಕ್ವಿಲಾಬ್ ಜಿಂದಾಬಾದ್, ಜೈ ಭೀಮ್” ನಂತಹ ಧನಾತ್ಮಕ ಘೋಷಣೆಗಳನ್ನು ಮಾತ್ರ ಬಳಸುವಂತೆ ಹಾಗೂ ಸತ್ಯಾಗ್ರಹದ ಪ್ರತಿಯೊಂದು ಕ್ಷಣಗಳನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳುವಂತೆ ಅಭಿಯಾನದ ನೇತಾರರು ಮನವಿ ಮಾಡಿದ್ದಾರೆ.