ಬೆಂಗಳೂರು: ಜಾಗತಿಕ ಏರೋಸ್ಪೇಸ್ ಸಂಸ್ಥೆ ‘ಕಾಲಿನ್ಸ್ ಏರೋಸ್ಪೇಸ್’ (Collins Aerospace) ಭಾರತದ ತನ್ನ ಮೊದಲ ನಿರ್ವಹಣೆ, ದುರಸ್ತಿ ಮತ್ತು ಪರಿಷ್ಕರಣೆ (MRO) ಘಟಕವನ್ನು ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ನಲ್ಲಿ ಸ್ಥಾಪಿಸಲಿದೆ. ಯೋಜನೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಶಂಕುಸ್ಥಾಪನೆ ನೆರವೇರಿಸಿದರು.
ಯೋಜನೆಗಾಗಿ ರಾಜ್ಯ ಸರ್ಕಾರ 26 ಎಕರೆ ಜಮೀನು ಮಂಜೂರು ಮಾಡಿದ್ದು, ಇದರಿಂದ 2,100 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.
ಭಾರತದ ಏರೋಸ್ಪೇಸ್ ವಲಯದ ಸುಮಾರು ಶೇ.65ರಷ್ಟು ಚಟುವಟಿಕೆಗಳು ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ. ಹೊಸ ಘಟಕವು ರಾಜ್ಯದ ಜಾಗತಿಕ ಏರೋಸ್ಪೇಸ್ ಕೇಂದ್ರದ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ವಾಯುಯಾನ ಸೇವೆಗಳ ರಫ್ತು ಮತ್ತು ಏಷ್ಯಾ-ಪೆಸಿಫಿಕ್ ಮಾರುಕಟ್ಟೆಯಲ್ಲಿ ಕಂಪನಿಯ ವಿಸ್ತರಣೆಗೆ ನೆರವಾಗಲಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಕಾಲಿನ್ಸ್ ಏರೋಸ್ಪೇಸ್ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಕಳೆದ ನವೆಂಬರ್ನಲ್ಲಿ ದೇವನಹಳ್ಳಿಯಲ್ಲಿನ ಕಂಪನಿಯ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ್ದನ್ನೂ ಸಚಿವರು ಸ್ಮರಿಸಿದರು.
ರಾಜ್ಯದ ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಡಿ 2031ರ ವೇಳೆಗೆ ಈ ವಲಯದಲ್ಲಿ ₹60,000 ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ 60,000 ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ವಾಯುಯಾನ ಮತ್ತು ರಕ್ಷಣಾ ವಲಯದ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ದೇಶೀಯ MRO ಸಾಮರ್ಥ್ಯ ಬೆಳೆಸುವುದು ಅಗತ್ಯ ಎಂದು ಸಚಿವರು ಹೇಳಿದರು.



