ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ (Private Hospitals) ಚಿಕಿತ್ಸೆ ಹೆಸರಿನಲ್ಲಿ ಔಷಧಿಗಳಿಗೆ(Medicines) ಹೆಚ್ಚಿನ ಹಣ ವಸೂಲಿ ಮಾಡಿ ರೋಗಿಗಳ ಜೇಬಿಗೆ ಕನ್ನ ಹಾಕುವುದನ್ನು ತಪ್ಪಿಸಲು ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಚಿಕಿತ್ಸೆಯ ಬಿಲ್(Medicines Bills) ನೀಡುವಾಗ ಔಷಧಿಗಳ ನಿಜವಾದ ಖರೀದಿ ಮೊತ್ತ ಹಾಗೂ ನಿಗದಿತ ದರವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೊಸ ಆದೇಶ ಹೊರಡಿಸಿದೆ.
ಸರ್ಕಾರಿ ಹಾಗೂ ಖಾಸಗಿ ವಲಯದ ಎಲ್ಲಾ ಆಸ್ಪತ್ರೆಗಳು, ಕ್ಲಿನಿಕ್ಗಳು, ಶುಶ್ರೂಷಾ ಕೇಂದ್ರಗಳು ಮತ್ತು ರಕ್ತ ತಪಾಸಣಾ ಕೇಂದ್ರಗಳಿಗೆ (ಡಯಾಗ್ನಸ್ಟಿಕ್ ಲ್ಯಾಬ್) ಈ ನೂತನ ನಿಯಮ ಅನ್ವಯವಾಗಲಿದೆ. ರೋಗಿಗಳಿಂದ ಅತಿಯಾದ ಹಣ ಸುಲಿಗೆ ಮಾಡುವುದಕ್ಕೆ ಕಡಿವಾಣ ಹಾಕಿ, ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ತರುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ಆಸ್ಪತ್ರೆಗಳು ಪಾಲಿಸಬೇಕಾದ ಪ್ರಮುಖ ನಿಯಮಗಳು:
ದರದ ಸಂಪೂರ್ಣ ಲೆಕ್ಕ: ಆಸ್ಪತ್ರೆ ನೀಡುವ ಪ್ರತಿಯೊಂದು ಬಿಲ್ನಲ್ಲಿ ಔಷಧಿಯ ಮೂಲ ದರ, ಆಸ್ಪತ್ರೆಗೆ ತಲುಪಿದಾಗ ಆದ ಒಟ್ಟು ಖರ್ಚು ಮತ್ತು ಗರಿಷ್ಠ ಮಾರಾಟ ದರವನ್ನು (MRP) ಪ್ರತ್ಯೇಕವಾಗಿ ಬರೆದು ಸ್ಪಷ್ಟಪಡಿಸಬೇಕು.
ಔಷಧಿಯ ನಿಖರ ಮಾಹಿತಿ: ಔಷಧಿಯ ಜೆನೆರಿಕ್ ಹೆಸರು, ಕಂಪನಿಯ ಬ್ರ್ಯಾಂಡ್, ಬ್ಯಾಚ್ ಸಂಖ್ಯೆಯ ಜೊತೆಗೆ ತಯಾರಾದ ಮತ್ತು ಮುಕ್ತಾಯದ (ಎಕ್ಸ್ಪೈರಿ) ದಿನಾಂಕವನ್ನು ತಪ್ಪದೇ ಉಲ್ಲೇಖಿಸಬೇಕು.
ದರಪಟ್ಟಿ ಪ್ರಕಟಣೆ: ಸಾರ್ವಜನಿಕರ ಗಮನಕ್ಕೆ ಬರುವಂತೆ ಆಸ್ಪತ್ರೆಯ ಎದುರು ಅಥವಾ ರೋಗಿಗಳ ವೀಕ್ಷಣೆಗೆ ಸಿಗುವ ಪ್ರಮುಖ ಸ್ಥಳದಲ್ಲಿ ಔಷಧಿಗಳ ಬೆಲೆಪಟ್ಟಿಯನ್ನು ಹಾಕುವುದು ಕಡ್ಡಾಯ.
ದಾಖಲೆಗಳ ಸಂರಕ್ಷಣೆ: ಔಷಧಗಳ ಆಮದು, ಖರೀದಿ ಹಾಗೂ ಮಾರಾಟದ ಲೆಕ್ಕಪತ್ರಗಳನ್ನು ಕನಿಷ್ಠ ಮೂರು ವರ್ಷಗಳ ಕಾಲ ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು.
ಕೇಂದ್ರ ಸರ್ಕಾರದ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ, ನಿಗದಿತ ದರಕ್ಕಿಂತ ದುಬಾರಿಯಾಗಿ ಔಷಧಿ ಮಾರಾಟ ಮಾಡುವುದು ಪತ್ತೆಯಾದರೆ ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಮನಸೋಇಚ್ಛೆ ಬಿಲ್ ಹಾಕಿದರೆ ಮುಲಾಜಿಲ್ಲದೆ ಕ್ರಮ: ಸಚಿವರ ಎಚ್ಚರಿಕೆ
ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, “ರೋಗಿಗಳನ್ನು ಸುಲಿಗೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಆಸ್ಪತ್ರೆಗಳು ತಮ್ಮಿಷ್ಟದಂತೆ ಮನಬಂದಂತೆ ಬಿಲ್ ವಿಧಿಸುವ ಪರಿಪಾಠ ನಿಲ್ಲಬೇಕು. ಈಗಾಗಲೇ ಹೊರಡಿಸಲಾಗಿರುವ ನಿರ್ದೇಶನಗಳನ್ನು ಪ್ರತಿಯೊಂದು ಆಸ್ಪತ್ರೆಯೂ ಕಡ್ಡಾಯವಾಗಿ ಜಾರಿಗೆ ತರಬೇಕು, ತಪ್ಪಿದಲ್ಲಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವುದು ಖಚಿತ” ಎಂದು ಎಚ್ಚರಿಕೆ ನೀಡಿದ್ದಾರೆ.




